ವರದಿ : ದಿನೇಶ್ ರಾಯಪ್ಪನಮಠ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು,
ರಾಜ್ಯದಲ್ಲಿ ನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಕೂಡ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಒದಗಿದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದಾರೆ.
ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement. Scroll to continue reading.
ರಾಜ್ಯದಲ್ಲಿ 27ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.