ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಧಾರ್ಮಿಕ ದತ್ತಿ ಇಲಾಖೆಯಿಂದ(ಸರ್ಕಾರ) ಕೊಡುವ ಅನುದಾನ ಕೇವಲ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿ ವಿನಿಯೋಗ ಮಾಡಬೇಕು ಎಂಬ ಕಾನೂನು ಧಾರ್ಮಿಕ ದತ್ತಿ ಇಲಾಖೆಯಲ್ಲಿದೆ. ಟೀಕೆ, ಟಿಪ್ಪಣಿ, ವಿಚಾರ, ಕಾನೂನು ಎಲ್ಲವನ್ನೂ ಗಮನಿಸಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಧಾರ್ಮಿಕ ದತ್ತಿ ಇಲಾಖೆಯ ಹಣ ಕೇವಲ ಹಿಂದೂ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿ ಖರ್ಚು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.
ನನ್ನ ಸೂಚನೆಯ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯ ಕಮಿಷ್ನರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಅನುಮತಿ ಕೊಡಲು ಕೋರಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಂತಹ ದೇವಸ್ಥಾನಗಳಿಗೆ ಸೀಮಿತವಾಗಿ ಇಲಾಖೆಯ ಹಣ ಖರ್ಚು ಮಾಡುವಂತೆ ಇವತ್ತು ಅಥವಾ ನಾಳೆ ಆದೇಶ ಬರಲಿದೆ. ಈ ಬಗ್ಗೆ ಆತಂಕ ಬೇಡ. ಇತರ ಪ್ರಾರ್ಥನ ಮಂದಿರಗಳಿಗೆ ಆಯಾಯ ಇಲಾಖೆಗಳೇ ಕೊಡಬಹುದು ಎಂದು ಸೂಚಿಸಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
Advertisement. Scroll to continue reading.
ರಾಜ್ಯದಲ್ಲಿರುವ 34,500 ಹಿಂದೂ ಧರ್ಮದ ದೇವಸ್ಥಾನಗಳಲ್ಲಿ 27,000 ದೇವಸ್ಥಾನಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ವಾರ್ಷಿಕ 48,000 ರೂ.ನಂತೆ ಸುಮಾರು 133 ಕೋ.ರೂ. ಯನ್ನು ತಸ್ತಿಕ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಭೂಸುಧಾರಣೆ ಸಂದರ್ಭದಲ್ಲಿ ಭೂಮಿಯನ್ನು ಕಳೆದುಕೊಂಡ ಧಾರ್ಮಿಕ ಕೇಂದ್ರಗಳಿಗೆ ವರ್ಷಾಸನ ರೂಪದಲ್ಲಿ ಇತರ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಮಧ್ಯೆ ವ್ಯಾಪಕ ಟೀಕೆ ಕೇಳಿಬಂದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ವರದಿ ತರಿಸಿಕೊಂಡಿದ್ದು ಮಾಹಿತಿ ಪಡೆದಿದ್ದೇನೆ. 27,000 ದೇವಸ್ಥಾನಗಳ ಪೈಕಿ 764 ದೇವಸ್ಥಾನಗಳಿಗೆ ಹಿಂದುಯೇತರ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು, ಪ್ರಾರ್ಥನಾ ಮಂದಿಗಳು ಮತ್ತು ಬಸದಿಗಳಿಗೆ ಇಲಾಖೆಯಿಂದ ವಾರ್ಷಿಕ ತಸ್ತಿಕ್ ಹೋಗುತ್ತದೆ. 114 ಸಂಸ್ಥೆಗಳಿಗೆ ವರ್ಷಾಸನ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.