ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಕಳೆದ ವರ್ಷ ಕೊರೋನಾ ಅಪ್ಪಳಿಸಿದ ನಂತರ ಮತ್ತು ಈ ವರ್ಷದ ಎರಡನೇ ಅಲೆ ಮತ್ತದರ ಲಾಕ್ ಡೌನ್ ವಿದ್ಯಾರ್ಥಿಗಳ ಭವಿಷ್ಯವನ್ನೇ ಡೋಲಾಯಮಾನ ಮಾಡಿದೆ. ಮಕ್ಕಳು ಮಾತೆತ್ತಿದರೆ ಆನ್ ಲೈನ್ ಕ್ಲಾಸ್ ಅಂತಾರೆ. ಆದರೆ ಸಿಟಿ ಮಕ್ಕಳಿಗೇನೋ ಓಕೆ, ಗ್ರಾಮೀಣ ಭಾಗದ ಮಕ್ಕಳು ಇನ್ನೂ ಆನ್ ಲೈನ್ ಗೆ ಒಗ್ಗಿಕೊಂಡಿಲ್ಲ. ಇದಕ್ಕೆ ಕಾರಣ ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ! ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾದ ಹಂಜ, ಕಾರೀಮನೆ ಹಾಗೂ ಎಡ್ಮಲೆ ಪರಿಸರದಲ್ಲಿ ನೆಟ್ವರ್ಕ್ ಸೌಲಭ್ಯವೇ ಇಲ್ಲ .
ಇಲ್ಲಿ ಸುಮಾರು 54 ಮನೆಗಳಿದ್ದು, 450 ರಿಂದ 500 ಜನ ವಾಸಿಸುತ್ತಿದ್ದಾರೆ. ಒಂದನೇ ತರಗತಿಯಿಂದ ಐಟಿಐ, ಪದವಿ ಸ್ನಾತಕೋತ್ತರ ತನಕದ ಸುಮಾರು 32 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮನೆಯಲ್ಲಿ ನೆಟ್ವರ್ಕ್ ಸಿಗದ ಕಾರಣ, ವಿದ್ಯಾರ್ಥಿಗಳು ನೆಟ್ ವರ್ಕ್ ಸಿಗುವ ಜಾಗವನ್ನು ಹುಡುಕಿಕೊಂಡು 5 ಕಿಲೋಮೀಟರ್ ದೂರದ ಬೆಟ್ಟವೇರಿ ಆನ್ಲೈನ್ ಕ್ಲಾಸ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಗುಡ್ಡದ ಮೇಲೆ ಪೋಷಕರು ಪ್ಲಾಸ್ಟಿಕ್ ಹೊದಿಸಿ ಟೆಂಟ್ ನಿರ್ಮಿಸಿದ್ದು, ಕಾಡಿನ ಮಧ್ಯದಲ್ಲಿ ಇರುವ ಈ ಟೆಂಟ್ನಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಆಲಿಸುವ ಪರಿಸ್ಥಿತಿ ಇದೆ. ಚಿಕ್ಕ ಚಿಕ್ಕ ಮಕ್ಕಳನ್ನು ಬೆಟ್ಟಕ್ಕೆ ಕರೆದುಕೊಂಡು ಬಂದು ಸಣ್ಣ ಟೆಂಟ್ನಲ್ಲಿ ಪಾಠ ಕೇಳುವುದಕ್ಕೂ ಕಷ್ಟವಾಗುತ್ತಿದೆ.
ಹಾಗಾಗಿ ತಮ್ಮೂರಿಗೂ ನೆಟ್ವರ್ಕ್ ಭಾಗ್ಯ ಕಲ್ಪಿಸಿ ಅಂತ ಸಂಬಂಧ ಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಅಂತಾರೆ ಊರವರು. ಸಂಬಂಧಪಟ್ಟವರು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇವರ ಕಷ್ಟಕ್ಕೆ ಕಿವಿಯಾದ್ರೆ ಈ ವಿದ್ಯಾರ್ಥಿಗಳು ನೆಮ್ಮದಿಯಾಗಿ ಓದಿನಲ್ಲಿ ತೊಡಗಿಕೊಳ್ಳಬಹುದು.
Advertisement. Scroll to continue reading.