ಕೋಟ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶ್ರೀನಿವಾಸ ಕುಂದರ್
Published
0
ವರದಿ : ದಿನೇಶ್ ರಾಯಪ್ಪನಮಠ
ಕೋಟ: ಪರಿಸರದ ಬಗ್ಗೆ ಕಾಳಜಿ ಅದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೋಟದ ಜನತಾ ಫಿಶ್ ಮೀಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್ ಅಭಿಪ್ರಾಯಪಟ್ಟಿದ್ದಾರೆ. ಕೋಟದ ಪಂಚವರ್ಣ ಯುವಕ ಮಂಡಲದ ಪರಿಸರ ಸ್ನೇಹಿ 82ನೇ ವಾರದ ಸರಣಿ ಕಾರ್ಯಕ್ರಮದ ಅಂಗವಾಗಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗದ ಸಹಯೋಗದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಕೋಟ ಇವರು ಕೊಡಮಾಡಿದ ಗಿಡಗಳನ್ನು ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟು ಪರಿಸರದ ಹಲವು ಮನೆಗಳಿಗೆ ಹಸ್ತಾಂತರಿಸುವ ಹಾಗೂ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮನೆಯ ಹಿತಲಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಮ್ಮಿಂದ ಆಗಬೇಕು ಆಗ ನಮ್ಮ ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ಸೃಷ್ಠಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗೀತಾನಂದ ಫೌಂಡೇಶನ್ ಪ್ರತಿವರ್ಷ ವಿವಿಧ ಸಂಘಸಂಸ್ಥೆಗಳಿಗೆ ಗಿಡಗಳನ್ನು ನೀಡುವ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿದೆ ಎಂದು ಹೇಳಿದರು.
ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್ ಹಿರೇಮಹಾಲಿಂಗೇಶ್ವರ ದೇವಸ್ಥಾನಬೆಟ್ಟು ಪರಿಸರದ ಮಾತೆಯರಿಗೆ ಗಿಡಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಗೀತಾನಂದ ಫೌಂಡೇಶನ್ ಸಾಮಾಜಿಕ ಕಾರ್ಯ ವಿಭಾಗದ ರವಿಕಿರಣ್ ಕೋಟ ಗಿಡಗಳನ್ನು ದೇವಳದ ಆಸುಪಾಸು ನೆಡುವ ಕಾರ್ಯಕ್ಕೆ ಕೈಜೋಡಿಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ, ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್ಯ, ಸದಸ್ಯರಾದ ಭಾಸ್ಕರ್ ದೇವಾಡಿಗ,ಕಾರ್ತಿಕ್ ಎನ್,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇದರ ಪ್ರದೀಪ್ ಪೂಜಾರಿ, ಗೋಪಿನಾಥ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಯುವಕ ಮಂಡಲದ ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ ಕಾರ್ಯಕ್ರಮ ಸಂಯೋಜಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ನಿರೂಪಿಸಿದರು.
ಪಂಚವರ್ಣ ಯುವಕ ಮಂಡಲದ ವತಿಯಿಂದ ೮೨ನೇ ಭಾನುವಾರದ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಕೋಟ ಹಿರೇಮಹಾಲಿಂಗೇಶ್ವರ ದೇವಳದ ಪರಿಸರದ ಮನೆಗಳಿಗೆ ಗಿಡಗಳನ್ನು ಹಂಚುವ ಮೂಲಕ ಜನತಾ ಫಿಶ್ ಮೀಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್ ಚಾಲನೆ ನೀಡಿದರು.