ರಾಜ್ಯ

ಮುರ್ಡೇಶ್ವರ : ಹಿರೇಧೋಮಿ ಅತ್ಯಾಚಾರ ಕೊಲೆ, ಪ್ರಕರಣ; ವೆಂಕಟೇಶ್ ಹರಿಕಾಂತ್ ನಿರಪರಾಧಿ ಎಂದು ಧಾರವಾಡ ಹೈಕೋರ್ಟ್ ತೀರ್ಪು

0
FacebookTwitterEmailWhatsAppShare

ವರದಿ : ದಿನೇಶ್ ರಾಯಪ್ಪನಮಠ

ಮರ್ಡೇಶ್ವರ : ಕಳೆದ 11 ವರ್ಷಗಳ ಹಿಂದೆ ಮುರುಡೇಶ್ವರದ ಹಿರೇಧೋಮಿಯಲ್ಲಿ ನಡೆದ ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೊದಲು ಬಂಧಿತನಾಗಿದ್ದ ವೆಂಕಟೇಶ್ ಹರಿಕಾಂತ್ ರನ್ನು ನಿರಪರಾಧಿ ಎಂದು ಕಾರವಾರ ಜಿಲ್ಲಾ ನ್ಯಾಯಾಲಯ 4 ವರ್ಷಗಳ ಹಿಂದೆ ನೀಡಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ. ಈ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶ ನೀಡಿದೆ.

ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ ಬರೋಬ್ಬರಿ 6 ವರ್ಷ 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ನಾಲ್ಕು ವರ್ಷದ ಹಿಂದೆ ಖುಲಾಸೆಗೊಂಡಿದ್ದರು. ಈ ಬಗ್ಗೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಧಾರವಾಡ ಉಚ್ಚ ನ್ಯಾಯಾಲಯದಿಂದಲೂ ನಿರಪರಾಧಿ ಎಂಬ ತೀರ್ಪು ಬಂದಿದೆ. ಅತ್ಯಾಚಾರ, ಹತ್ಯೆಯಾಗಿದ್ದ ಸ್ಥಳದಲ್ಲಿ ವೀರ್ಯದ ಅಂಶ, ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ಪತ್ತೆಯಾಗಿತ್ತು. ಅದನ್ನು ಸಂಗ್ರಹಿಸಿ ಹೈದ್ರಾಬಾದ್ ನ ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವೆಂಕಟೇಶ್ ಅವರ ಡಿಎನ್‍ಎ ಪರಿಕ್ಷೆಯನ್ನೂ ನಡೆಸಲಾಗಿದ್ದು 11 ತಿಂಗಳ ಬಳಿಕ ಬಂದ ವರದಿಯಲ್ಲಿ ಆ ವೀರ್ಯದ ಮಾದರಿ ವೆಂಕಟೇಶ್ ಅವರದ್ದಲ್ಲ ಎಂಬುದಾಗಿತ್ತು.

Advertisement. Scroll to continue reading.

ಯಮುನಾ ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ‌ ಸಿಗಬೇಕಾದಲ್ಲಿ ನೈಜ ಆರೋಪಿಗಳ‌ ಬಂಧನವಾಗಬೇಕು‌ ಎಂದು ಹೇಳಿರುವ ಉಚ್ಚ ನ್ಯಾಯಾಲಯ‌ ಮುರ್ಡೇಶ್ವರ ಪಿಎಸ್ಐ ಅವರನ್ನು ತನಿಖಾಧಿಕಾರಿಯಾಗಿ ಮಾಡಿ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. 11 ವರ್ಷದ ಹಿಂದಿನ ಪ್ರಕರಣ ಮರುತನಿಖೆಯಾಗುತ್ತಿದ್ದು, ಮೊದಲು ಎಫ್.ಐ.ಆರ್ ನಲ್ಲಿ ಹೆಸರಿದ್ದ 7 ಮಂದಿ ಮರು ವಿಚಾರಣೆಗೆ ಆದೇಶಿಸಲಾಗಿದೆ. ಈ ಬಗ್ಗೆ ಅವರೆಲ್ಲರ ವೀರ್ಯ, ರಕ್ತ, ಉಗುರು, ಕೂದಲಿನ ಮಾದರಿ ಸಂಗ್ರಹಿಸಲು ಸೂಚನೆ‌ ನೀಡಲಾಗಿದೆ. ಮೊಹಮ್ಮದ್ ಸಾಧಿಕ್ ದೊಣ್ಯ, ಖಾಸೀಫ್ ಮೊಹಮ್ಮದ್, ಮೊಹಮ್ಮದ್ ನಾಸೀರ್, ಯಾಸೀನ್ ಶೇಖ್, ನೀಲಗಿರಿ ಸಿದ್ದಿ ಮೊಹಮ್ಮದ್, ಹಬೀಬ್ ಶೇಖ್, ಅಂಡಾ ನಾಸೀರ್ ಶೇಖ್ ವಿಚಾರಣೆಗೆ ಹೈಕೋರ್ಟ್‌ ಆದೇಶಿಸಿದೆ.

ಏನಿದು ಪ್ರಕರಣ?

2010 ಅಕ್ಟೋಬರ್ 23 ರಂದು ಮೊಹಮ್ಮದ್ ಸಾದಿಕ್‌ ಎನ್ನುವವರ ಮನೆಯಲ್ಲಿ ಮನೆ ಕೆಲಸಕ್ಕಿದ್ದ ಅದೇ ಗ್ರಾಮದ ಬಡ ಯುವತಿ ಯಮುನಾ ನಾಯ್ಕ್‌ ಎನ್ನುವಾಕೆಯನ್ನು ಅತ್ಯಾಚಾರ ಎಸಗಿ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯುವತಿ ಮನೆಗೆ ಬಾರದಾಗ ಆತಂಕಗೊಂಡ ಪೋಷಕರು ಹುಡುಕಾಡಿದಾಗ ಕಟ್ಟಿಗೆ ಶೆಡ್‌ ಬಳಿ ಶವ ಪತ್ತೆಯಾಗಿತ್ತು. ಅತೀ ಕೋಮು ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ನಡೆದ ಈ ಪ್ರಕರಣ ಕೋಮು ರೂಪ ಪಡೆದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ ಗಲಭೆ ಸೃಷ್ಟಿಯಾಗುವ ಸಂಭವವೂ ನಿರ್ಮಾಣವಾಗಿತ್ತು.

ಯಮುನಾ ತಂದೆ ನಾಗಪ್ಪ ನಾಯ್ಕ್ ಮೊದಲಿಗೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಾಥಮಿಕ ತನಿಖಾ ವರದಿಯಲ್ಲಿ (ಎಫ್.ಐ.ಆರ್) 9 ಮಂದಿ ಅನ್ಯಕೋಮಿನವರ ವಿರುದ್ಧ ದೂರು ನೀಡಿದ್ದು ಅದರಲ್ಲಿ ಮಗಳು‌ ಕೆಲಸಕ್ಕಿದ್ದ ಮನೆಮಾಲಿಕ ಆತನ ಮಗನ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ತಕ್ಷಣದ ಬೆಳವಣಿಗೆಯಲ್ಲಿ ಕೊಲೆಯಾದ ಯುವತಿ ತಂದೆ ವೆಂಕಟೇಶ್ ಹರಿಕಾಂತ್ ಹೆಸರು‌ ಉಲ್ಲೇಖಿಸಿ ದೂರು‌ ನೀಡಿದ್ದರು. ಅದರ ಅನ್ವಯ ವೆಂಕಟೇಶ್ ಹರಿಕಾಂತನನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಭಟ್ಕಳದಲ್ಲಿ ಶ್ರೀರಾಮ ಸೇನೆಯು ಪ್ರತಿಭಟನೆಯನ್ನು ನಡೆಸಿ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಲ್ಲದೆ‌ ಸಿಒಡಿ ತನಿಖೆಗೆ ‌ಒಪ್ಪಿಸಲು ಆಗ್ರಹಿಸಲಾಗಿತ್ತು.

ಪತಿ ನಿರಪರಾಧಿ ಎಂದು ಅರಿತ ಪತ್ನಿ ಮಾದೇವಿ ತನ್ನ ಸಹೋದರ ಬಾಲಕೃಷ್ಣ ಸಹಕಾರದಲ್ಲಿ ಕಾನೂನು ಹೋರಾಟಕ್ಕೆ ಇಳಿದರು. ಶ್ರೀರಾಮ ಸೇನೆ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಬೆಂಬಲದೊಂದಿಗೆ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ ಅವರನ್ನು ಭೇಟಿಯಾಗಿ ಸಂಪೂರ್ಣ ಪ್ರಕರಣದ ಬಗ್ಗೆ ವಿವರಿಸಿದ್ದು ಅವರು ವೆಂಕಟೇಶ್‌ ಪರ ವಾದ ಮಂಡಿಸಿದ್ದರು

Advertisement. Scroll to continue reading.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರಿಗೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯಂತ್‌ ನಾಯ್ಕ್ ಇನ್ನಿತರರು ನ್ಯಾಯವಾದಿಗಳ ಕಚೇರಿಗೆ ಶನಿವಾರ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರಹಿಂಸೆ ಅನುಭವಿಸಿದ್ದೇನೆ :


ನಾನು ನಿರಪರಾಧಿಯಾದರೂ ಅಂದು ಪೊಲೀಸರು ನನಗೆ ಚಿತ್ರ ಹಿಂಸೆ ನೀಡಿದ್ದಾರೆ. 6 ವರ್ಷ 8 ತಿಂಗಳನ್ನು ಜೈಲಿನಲ್ಲಿ ಕಳೆದಿದ್ದೇನೆ. ಈ ವೇಳೆ ನನ್ನ ಹೆಂಡತಿ ಮಕ್ಕಳು ಅನುಭವಿಸಿದ ನನ್ನ ಕಳೆದು ಹೋದ ಜೀವನ ಮತ್ತೆ ಸಿಗುವುದಿಲ್ಲ ಆದರೆ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾಗಿರುವ ಯಮುನಾಗೆ ನ್ಯಾಯ ಸಿಗಬೇಕು. ನನ್ನನ್ನು ಹಿಂಸಿಸಿ ಶಿಕ್ಷೆ ಅನುಭವಿಸುವಂತೆ ಮಾಡಿದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ಗೆ ಶಿಕ್ಷೆಯಾಗಬೇಕು.

Advertisement. Scroll to continue reading.
Click to comment

You May Also Like

Uncategorized

1 ಶಿರ್ವ : ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಸಂಘವನ್ನು ಉದ್ಘಾಟಿಸಲಾಯಿತು. ಸಂತ ಮೇರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಹೆರಾಲ್ಡ್ ಮೊನೀಸ್  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದಲ್ಲೇ ಭವಿಷ್ಯದ...

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com