ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಖ್ಯಾತ ಕಲಾವಿದರನ್ನು ಕೊಡುಗೆಯಾಗಿ ನೀಡಿದ ಹಿರಿಯ ತರಬೇತಿ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಐವತ್ತರ ಸಂಭ್ರಮಕ್ಕೆ ಚಾಲನೆ ಹಾಗೂ ಯುವ ಕಲಾವಿದರಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಆ.15ರಂದು ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಜರಗಿತು.
ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಕಲಾಕೇಂದ್ರವು ಯಕ್ಷಗಾನ ಕ್ಷೇತ್ರಕ್ಕೆ ಸುವರ್ಣ ಪುಷ್ಪವಿದ್ದಂತೆ. ದಿ| ಸದಾನಂದ ಹೆಬ್ಬಾರರ ಪರಿಶ್ರಮದಲ್ಲಿ ಕಟ್ಟಿಬೆಳೆದ ಸಂಸ್ಥೆಯನ್ನು ರಾಜಶೇಖರ್ ಹೆಬ್ಬಾರ್ ದಕ್ಷ ಆಡಳಿತದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಖುಷಿಯ ವಿಚಾರ ಎಂದರು ಹಾಗೂ ಸರಕಾರದಿಂದ ಪರಿಹಾರಧನ ವಂಚಿತ ಕಲಾವಿದರಿಗೆ ಕಲಾಕೇಂದ್ರದ ಮೂಲಕ ಹೆಚ್ಚಿನ ಪರಿಹಾರಧನ ನೀಡುತ್ತಿರುವುದು ಯಕ್ಷಗಾನದ ಇತಿಹಾಸದಲ್ಲೇ ಅಪರೂಪ ಎಂದರು.
ಯುವ ಕಲಾವಿದರಿಗೆ ಸಹಾಯಧನ :
ಕೋವಿಡ್ ಪರಿಹಾರಧನ ವಿತರಣೆಯಲ್ಲಿ 35 ವರ್ಷದೊಳಗಿನ ಯುವ ಕಲಾವಿದರನ್ನು ಪರಿಗಣಿಸದಿರುವುದರಿಂದ ಯುವ ಕಲಾವಿದರಿಗೆ ಅನ್ಯಾಯವಾಗಿದೆ ಎನ್ನುವ ಕೂಗು ಯಕ್ಷಾಭಿಮಾನಿಗಳಿಂದ ಕೇಳಿಬಂದಿದ್ದು, ಹಂಗಾರಕಟ್ಟೆ ಕಲಾಕೇಂದ್ರ ಕೂಡ ಈ ಬಗ್ಗೆ ಧ್ವನಿಗೂಡಿಸಿತ್ತು. ಆದರೆ ಸರಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ದಾನಿಗಳಿಂದ ಧನಸಂಗ್ರಹಿಸಿ ನೂರು ಮಂದಿ ಯುವ ವೃತ್ತಿ ಕಲಾವಿದರಿಗೆ ಹಾಗೂ ಯಕ್ಷಗಾನದ ಗುರುಗಳಾಗಿ ಸೇವೆ ಸಲ್ಲಿಸುವ 10 ಮಂದಿಗೆ ತಲಾ ನಾಲ್ಕು ಸಾವಿರ ರೂನಂತೆ 4.40ಲಕ್ಷ ಮೌಲ್ಯದ ಪರಿಹಾರಧನ ವಿತರಿಸಲಾಯಿತು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಈ ಕುರಿತು ಪ್ರಾಸ್ತಾವಿಕ ಮಾತನಾಡಿ, ಸರಕಾರ ಮುಂದೆ ಯಕ್ಷಗಾನ ಕಲಾವಿದರಿಗೆ ಯೋಜನೆಗಳನ್ನು ರೂಪಿಸುವಾಗ ತಾರತಮ್ಯ ಧೋರಣೆಯನ್ನು ಕೈಬಿಡಬೇಕು. ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಬೇಕು ಎಂದರು.
ಈ ಸಂದರ್ಭ ಸೆಲ್ಕೋ ಸೋಲಾರ್ ಪ್ರೈ.ಲಿಮಿಟಿಡ್ ಸಂಸ್ಥೆ ಕಲಾಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ “ಸೋಲಾರ್ ರಂಗ ಸ್ಥಳ”ವನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ„ಕಾರಿ ಮೋಹನ್ ಹೆಗಡೆ ಉದ್ಘಾಟಿಸಿದರು. ಸೆಲ್ಕೋ ಸಂಸ್ಥೆಯ ಮಹಾಪ್ರಬಂಧಕ ಜಗದೀಶ್ ಪೈ, ಉಪ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ ಹಾಗೂ ಕಲಾಕೇಂದ್ರದ ಯಕ್ಷಗಾನ ಗುರುಗಲಾದ ಸದಾನಂದ ಐತಾಳ ಉಪಸ್ಥಿತರಿದ್ದರು.
ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ನಿವೃತ್ತ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ಸೀತಾರಾಮ್ ಸೋಮಯಾಜಿ ವಂದಿಸಿದರು.
ಯಕ್ಷಗಾನ ಕ್ಷೇತ್ರಕ್ಕೆ ಖ್ಯಾತ ಕಲಾವಿದರನ್ನು ಕೊಡುಗೆಯಾಗಿ ನೀಡಿದ ಹಿರಿಯ ತರಬೇತಿ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಐವತ್ತರ ಸಂಭ್ರಮಕ್ಕೆ ಚಾಲನೆ ಹಾಗೂ ಯುವ ಕಲಾವಿದರಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಆ.15ರಂದು ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಷಿ ಚಾಲನೆ ನೀಡಿದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ಸೆಲ್ಕೋ ಸಂಸ್ಥೆಯ ಮಹಾಪ್ರಬಂಧಕ ಜಗದೀಶ್ ಪೈ, ಉಪ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



































