ವರದಿ : ದಿನೇಶ್ ರಾಯಪ್ಪನಮಠ
ಗಂಗೊಳ್ಳಿ : ಹೊಸಾಡು ಗ್ರಾಮದ ಅರಾಟೆ ಜನರ ದೂರ ದೃಷ್ಟಿಯ ಆಲೋಚನೆಯಿಂದ ನಿರ್ಮಾಣಗೊಂಡ ನೂತನ ಬಸ್ ತಂಗುದಾಣಕ್ಕೆ ವಾಜಪೇಯಿ ಅವರ ಹೆಸರನ್ನು ಇಡುವುದರ ಮೂಲಕ ವಿಶೇಷವಾದ ಗೌರವವನ್ನು ಗ್ರಾಮದ ಜನರು ಅವರಿಗೆ ಸಲ್ಲಿಸಿದ್ದಾರೆ. ಇಲ್ಲಿನ ಜನರ ಬಹು ಮುಖ್ಯ ಬೇಡಿಕೆಗಳೊಂದಾದ ಬಸ್ ತಂಗುದಾಣವು ಹೋರಾಟದ ಫಲದಿಂದ ನಿರ್ಮಾಣಗೊಂಡಿದೆ. ಹೊಸಾಡು ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸುಮಾರು ೩ ಲಕ್ಷ ರೂ. ವೆಚ್ಚದಲ್ಲಿ ಹೊಸಾಡು ಗ್ರಾಮದ ಅರಾಟೆಯಲ್ಲಿ ರಾ.ಹೆ.೬೬ರ ಸಮೀಪ ನಿರ್ಮಾಣಗೊಂಡ ಸುಸಜ್ಜಿತವಾದ ನೂತನ ಬಸ್ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯತಿಗೂ ೨೦ ರಿಂದ ೨೫ ಮನೆಗಳು ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಗ್ರಾಮ ಪಂಚಾಯತಿಗಳೊAದಿಗೆ ವಿಶೇಷ ಸಭೆ ಕರೆಯಲಾಗಿದೆ. ೯೪ಸಿ,೯೫ಸಿಸಿ,೫೩ ಮತ್ತು ೫೭ ರ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಶುಭಾಂಶನೆಗೈದರು. ಈ ಸಂದರ್ಭದಲ್ಲಿ ಹೊಸಾಡು-ಅರಾಟೆ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಕರ್ಯಕಾರಿಣಿ ಸದಸ್ಯ ಹರೀಶ್ ಮೇಸ್ತ ಗುಜ್ಜಾಡಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ರಾಮಚಂದ್ರ ನಾವಡ, ಹರೀಶ್ ಶೆಟ್ಟಿ ದೇವಲ್ಕುಂದ, ರಾಘವೇಂದ್ರ ಆಚಾರ್ಯ ಅರಾಟೆ, ನಾಗರಾಜ ಮೊಗವೀರ ಅರಾಟೆ, ನಾಗರಾಜ ಖಾರ್ವಿ ಗಂಗೊಳ್ಳಿ, ಮಿಥನ್ ದೇವಾಡಿಗ ತ್ರಾಸಿ, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ರಮೇಶ ಆಚಾರ್ಯ ಅರಾಟೆ ಸ್ವಾಗತಿಸಿದರು. ಹಿರಿಯರಾದ ಎಂ.ಎ. ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಶರತ್ ಮೊವಾಡಿ ನಿರೂಪಿಸಿದರು.



































