ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಮತ್ತು ಪುರಸಭೆ ಕುಂದಾಪುರದ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಹಬ್ಬ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನಾಡಿದ ಶ್ವೇತಾ ಸಂತೋಷ್, ಇದೇ ಮೊದಲ ಬಾರಿಗೆ ಪುರಸಭಾ ವ್ಯಾಪ್ತಿಯಲ್ಲಿ ಪೋಷಣಾ ಅಭಿಯಾನ ನಡೆಯುತ್ತಿದೆ. ಇದು ಈ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಿರುವುದಲ್ಲ. ವರ್ಷದ ೧೨ ತಿಂಗಳು ನಾವು ಪೌಷ್ಟಿಕ ಆಹಾರದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಸ್ಥಳೀಯ ತರಕಾರಿ, ಹಣ್ಣು ಹಂಪಲಿಗೆ ಹೆಚ್ಚು ಒತ್ತು ನೀಡಬೇಕು. ಗರ್ಭಿಣಿಯರು, ಬಾಣಂತಿಯರು, ಮಕ್ಕಳಲ್ಲಿ ಕಾಡುತ್ತಿರುವ ಪೌಷ್ಟಿಕತೆಯ ಪ್ರಮಾಣ ಹೆಚ್ಚಿಸಲು ಈ ಕಾರ್ಯಕ್ರಮದ ಮೂಲಕ ಮಾಹಿತಿ ನೀಡುತ್ತೇವೆ ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪೌಷ್ಟಿಕ ಹಬ್ಬ ಕಾರ್ಯಕ್ರಮ ಮನುಷ್ಯನ ಆರೋಗ್ಯಕರ ಜೀವನಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಶ್ವೇತಾ, ಪುಷ್ಪಾ ಶೇಟ್, ದೇವಕಿ ಸಣ್ಣಯ್ಯ, ರಾಘವೇಂದ್ರ ಖಾರ್ವಿ, ಹೇಮಾವತಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಉಷಾ ಸ್ವಾಗತಿಸಿ, ಕಂದಾಯ ನೀರಿಕ್ಷಕಿ ಜ್ಯೋತಿ ವಂದಿಸಿದರು. ಬಿ.ಪ್ರಭಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
