ಬೆಂಗಳೂರು : ರಾಜ್ಯ ಸರ್ಕಾರವು ಆನ್ಲೈನ್ ಜೂಜು (Online Gambling) ಹಾಗೂ ಬೆಟ್ಟಿಂಗ್ ನಿಷೇಧಿಸುವ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆಯ ತಿದ್ದುಪಡಿಗೆ ಅಧಿಸೂಚನೆ ನೀಡಿದೆ.
ಆನ್ಲೈನ್ ಜೂಜಾಟ ನಿಷೇಧ ಸಂಬಂಧ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ಆನ್ಲೈನ್ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರ್ನಾಟಕದ ಪೊಲೀಸ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದರು. ಇದೀಗ ಆನ್ ಲೈನ್ ಜೂಜಾಟ ನಿಷೇಧಿಸುವ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಗೆ ಅಧಿಸೂಚನೆ ನೀಡಲಾಗಿದೆ.
ಅಂಗೀಕರಿಸಲಾದ ಈ ಕಾನೂನಿನ ಅಡಿಯಲ್ಲಿ, ಆನ್ಲೈನ್ ಜೂಜು ಹಾಗೂ ಬೆಟ್ಟಿಂಗ್ ಕಾನೂನು ಉಲ್ಲಂಘನೆಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂವರೆಗೆ ದಂಡ ವಿಧಿಸಲಾಗುತ್ತದೆ.

ಒಂದು ವೇಳೆ ಯಾರಾದರೂ ಆನ್ಲೈನ್ನಲ್ಲಿ ತೊಡಗಿಕೊಂಡಿರುವುದು ಕಂಡುಬಂದರೆ ಅಂಥವರ ಮೇಲೆ 1 ವರ್ಷದ ಬದಲಿಗೆ 3 ವರ್ಷ ಹಾಗೂ 1 ಸಾವಿರಕ್ಕೆ ಬದಲಾಗಿ 1 ಲಕ್ಷ ದಂಡವನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಕಂಪ್ಯೂಟರ್, ಸಿಸ್ಟಮ್, ಮೊಬೈಲ್ ಆ್ಯಪ್, ಇಂಟರ್ನೆಟ್, ಸಮೂಹ ಸಾಧನ, ವಿದ್ಯುನ್ಮಾನ ಅನ್ವಯಿಕೆ, ತಂತ್ರಾಂಶ, ವರ್ಚುವಲ್ ಮೂಲಕ ಆಡುವ ಎಲ್ಲಾ ಗೇಮ್ ಗಳನ್ನು ನಿಷೇಧ ಮಾಡಲಾಗಿದೆ.

































