ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ಪ್ರತೀ ವರ್ಷ ಆಚರಿಸುವ ಸಂಸ್ಮರಣಾ ಮತ್ತು ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ ಅಕ್ಟೋಬರ್ 24 ರಂದು ಭಾನುವಾರ ಸಂಜೆ ಗಂಟೆ 5.30 ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ.
ಈ ವರ್ಷ ಯಕ್ಷಗಾನ ಪ್ರಪಂಚದ ಧೀಮಂತ ಕಲಾವಿದ, ಪ್ರಮುಖ ವಿಮರ್ಶಕ, ಶ್ರೇಷ್ಠ ಅಧ್ಯಾಪಕ, ಸಂಶೋಧಕ, ಸಾಮಾಜಿಕ ಕಾರ್ಯಕರ್ತ, ಸಂಘಟಕ ಮತ್ತು ಕಲಾವಿದರ ಆಪ್ತರಾದ ಹಲವು ಪ್ರತಿಭೆಗಳ ಸಂಗಮ, ಸಾಮಗ ಶೇಣಿ ಯುಗದಿಂದ ಈವರೆಗೆ ಪ್ರಮುಖ ಅರ್ಥದಾರಿಯಾಗಿ, ಅಭಿವ್ಯಕ್ತಿಯ ಮೊನಚು, ಮಂಡನೆಯ ಸೊಬಗು, ಸದಭಿರುಚಿ, ಪಾತ್ರ ವೈವಿಧ್ಯ, ಚಿಂತನೆ, ವಿಶಿಷ್ಟ ಪುರಾಣ ವ್ಯಾಖ್ಯಾನ, ಸಂವಾದ ಸೌಂದರ್ಯ ಬಹುಮುಖಿ ಪಾಂಡಿತ್ಯಗಳ ಬಳಕೆಗಳಿಂದ ವಿಶಿಷ್ಟ ಸಾಧನೆಗೈದ ಸಮನ್ವಯಶೀಲ ಕಲಾವಿದರಾದ, ಉತ್ತಮ ಉಪನ್ಯಾಸಕಾರ ವಿಸ್ತೃತ ಪರಿಶೀಲನೆ, ಬಹುಭಾಷಾವಿದತ್ವ, ಆತ್ಮೀಯತೆಯ, ಖಚಿತ ಅಭಿಮತ, ಸಹಕಾರ ಮನೋಧರ್ಮ, ಸರಸ ಸ್ವಭಾವದ, ಸಮಯಪಾಲನೆ, ನಿಸ್ಪøಹತೆ, ಜೀವಂತಿಕೆಗಳಿಂದ ವಿವಿಧ ಸ್ತರಗಳಲ್ಲಿ ಆತ್ಮೀಯರಾಗಿರುವ, ನಾಡಿನ ಅಗ್ರಪಂಕ್ತಿಯ ಸಾಂಸ್ಕೃತಿಕ ಸಾಧಕ ಡಾ| ಪ್ರಭಾಕರ ಜೋಷಿಯವರನ್ನು ಸದಾನಂದ ಹೆಬ್ಬಾರರ ನೆನಪಿನಲ್ಲಿ ನೀಡಲಾಗುವ 2021 ರ ಸದಾನಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
2004 ರಿಂದ ಈ ಪ್ರಶಸ್ತಿಯನ್ನು ಸದಾನಂದ ಹೆಬ್ಬಾರರು ಕಾರ್ಯೋನ್ಮುಖರಾಗಿದ್ದ ಕ್ಷೇತ್ರಗಳಲ್ಲಿ ಸೇವೆಗೈದಂತಹ ಮಹನೀಯರಿಗೆ ನೀಡಲಾಗುತ್ತಿದ್ದು ಅನಂತನಾರಾಯಣ ಐತಾಳ, ಕಾಂತಪ್ಪ ಮಾಸ್ತರ್, ಗೋವಿಂದ ಉರಾಳ, ವಿಶ್ವೇಶ್ವರ ಅಡಿಗ, ಮೋಹನ ಆಳ್ವ, ಬಹರಿಕೃಷ್ಟ ಪುನರೂರ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ, ರಾಘವ ನಂಬಿಯಾರ್, ಕೃಷ್ಠಮೂರ್ತಿ ಮಂಜ, ಎಮ್.ಎ.ಹೆಗಡೆ, ಮಣೂರು ನರಸಿಂಹ ಮಧ್ಯಸ್ಥ, ಡಾ|ನಾ.ಮೊಗಸಾಲೆ, ಕಂಬದಕೊಣೆ ಪ್ರಕಾಶ ರಾವ್, ಡಾ|ಟಿ.ಶ್ಯಾಮ ಭಟ್, ಜನಾರ್ಧನ ಮರವಂತೆ, ಪ್ರಾಚಾರ್ಯ ಸದಾನಂದ ಐತಾಳರವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.



































