ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರೈತ ಬೆಳೆದ ಭತ್ತದ ಕಟಾವಿಗೆ ಹೊರ ರಾಜ್ಯದಿಂದ ಬಂದ ಭತ್ತದ ಕಟಾವು ಯಂತ್ರದ ಬೆಲೆ ನಿಗದಿ ಕುರಿತು ಒಂದೆಡೆಯಲ್ಲಿ ಚರ್ಚೆಯೆ ಆಗುತ್ತಿದ್ದರೆ, ಕಟಾವು ಮಾಡಿದ ಬಳಿಕ ಒಣ ಹುಲ್ಲನ್ನು ಸುರುಳಿ ಮಾಡುವ ಯಂತ್ರಗಳು ಬ್ರಹ್ಮಾವರ ಆಕಾಶವಾಣಿ ಬಳಿಯ ರಸ್ತೆಯಲ್ಲಿ ಕಳೆದ 15 ದಿನದಿಂದ ಕೆಲಸ ಇಲ್ಲದೆ ಕಂಗೆಟ್ಟು ನಿಂತಿದೆ.

8 ಯಂತ್ರಗಳು ಮತ್ತು ಅದರ ಚಾಲಕರು 8 ಬೈಕ್ ಗಳು ಇನ್ನಿತರ ಸಾಮಾನು ಸರಂಜಾಮುವಿನೊಂದಿಗೆ ಇಲ್ಲಿನ ಬಸ್ ನಿಲ್ದಾಣದಲ್ಲಿಯೇ ಅವರ ಊಟ ತಿಂಡಿ ಮತ್ತು ದಿನಚರಿಯಾಗಿದೆ. ಒಂದು ಸುರುಳಿಗೆ 50 ರೂ. ನಿಗದಿ ಪಡಿಸಿದ್ದು, ಒಣಗಿದ ಗದ್ದೆಯಲ್ಲಿ 5 ನಿಮಿಷಕ್ಕೆ ಒಂದು ಸುರುಳಿಯನ್ನು ಮಾಡಲಾಗುತ್ತಿದ್ದು, ಇವರದು ಸುರುಳಿಯ ಲೆಕ್ಕದಲ್ಲಿ ದರ ನಿಗದಿಯಾಗಿದೆ.

ಬಹತೇಕ ಗದ್ದೆಗಳು ಕಟಾವಿಗೆ ಬಂದು ಕಳೆದ ಕೆಲವು ದಿನದಿಂದ ಬರುವ ಮಳೆಗೆ ಕಟಾವು ಯಂತ್ರವಾಗಲಿ ಒಣಗಿದ ಹುಲ್ಲನ್ನು ಸುರುಳಿ ಮಾಡುವುದಾಗಲಿ ಗದ್ದೆಗೆ ಇಳಿಯದಂತಾಗಿದೆ. 15 ದಿನದಿಂದ ದುಡಿಮೆ ಇಲ್ಲದೆ ಲಕ್ಷಾಂತರ ರೂಪಾಯಿ ಯಂತ್ರದ ಜೊತೆ ಮಾನವ ಶಕ್ತಿಯ ಆದಾಯ ಕೂಡಾ ಇಲ್ಲದಂತಾಗಿದೆ.
ರಾಜ್ಯದಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ಯಾಂತ್ರೀಕೃತ ಕೃಷಿಯ ಕುರಿತು ಕೇವಲ ಭಾಷಣಗಳು ಮಾತ್ರ ಸೀಮಿತವಾಗಿದ್ದ ಕಾರಣ ದೂರದ ತೆಲಂಗಾಣ, ತಮಿಳು ನಾಡು ಮತ್ತು ಕೇರಳದಿಂದ ಬರುವ ಯಂತ್ರಗಳು ಮತ್ತು ಅವರು ಕೇಳುವ ಬೆಲೆಗೆ ಇಲ್ಲಿನ ರೈತರು ಅವಲಂಬಿಸಲೇಬೇಕಾಗಿದೆ.



































