ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಕೂತೂಹಲಕಾರಿಯಾಗಿದ್ದು ಕಾಂಗ್ರೆಸ್ ಪಕ್ಷದಿಂದ ಇನ್ನೂ ಕೂಡಾ ಚುನಾವಣಾ ಕಣಕ್ಕೆ ಇಳಿಸುವವರ ಹೆಸರು ಪಕ್ಷದಿಂದ ಪ್ರಕಟವಾಗಿಲ್ಲ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಈಗಾಗಲೇ ಪಕ್ಷದ ವರಿಷ್ಠರು ಘೋಷಣೆ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ಬೆಳಿಗ್ಗೆ ತನಕ ಕೂಡಾ, ಡಾ ರಾಜೇಂದ್ರ ಕುಮಾರ್ ರನ್ನು ಸ್ಪರ್ಧಾಕಣಕ್ಕೆ ಇಳಿಸುವುದಾಗಿದ್ದರೂ, ಕೊನೆ ಕ್ಷಣದಲ್ಲಿ ಸಹಕಾರಿಯಾಗಿ ರಾಜಕೀಯಕ್ಕೆ ಬರಲಾರೆ ಎಂದು ದೂರಸರಿದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ದುಡಿದು ಜನರೊಂದಿಗೆ ಬೆರೆತ ಸಮರ್ಥರನ್ನು ಮತ್ತು ನಿಷ್ಠಾವಂತರು ಕಣಕ್ಕಿಳಿಸಬೇಕಾಗಿದೆ. ಕಾಂಗ್ರೆಸ್ನಿಂದ ಪ್ರತಾಪಚಂದ್ರ ಶೆಟ್ಟರು ಸ್ಪರ್ಧೆಗೆ ಇಲ್ಲದ ಕಾರಣ ಅತೀ ಹೆಚ್ಚು ಹೆಸರು ಕೇಳಿ ಬರುವ ಮಂಜುನಾಥ್ ಭಂಡಾರಿ ಮತ್ತು ಕಾಂಗ್ರೆಸ್ ಕಟ್ಟಾಳು ರಾಜಕೀಯದ ಒಳ ಹೊರಗಿನದ್ದು ಬಲ್ಲ ಜೊತೆಗೆ ಶ್ರೀನಿವಾಸ ಪೂಜಾರಿ ಅವರಂತೆ ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಬ್ರಹ್ಮಾವರ ಭುಜಂಗ ಶೆಟ್ಟಿ ಅವರು ಸಮರ್ಥರು ಎಂದು ಕೇಳಿ ಬರುತ್ತಿದೆ.
ಸರಳ ರಾಜಕಾರಣಿ:

ಬ್ರಹ್ಮಾವರ ವಾರಂಬಳ್ಳಿ ಮಂಡಲ ಪಂಚಾಯತಿ ಅಧ್ಯಕ್ಷರಾಗಿ ರಾಜಕೀಯವಾಗಿ ಕಾಂಗ್ರೆಸ್ ನಿಂದ ದಿವಂಗತ ಓಸ್ಕರ್ ಫೆರ್ನಾಡಿಂಸ್ ರವರ ನಿಕಟ ಒಡನಾಡಿಯಾದ ಭುಜಂಗ ಶೆಟ್ಟಿಯವರು ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಗುರುತಿಸಿಕೊಂಡು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಬೆಳೆಸುವಲ್ಲಿ ಶ್ರಮವಹಿಸಿದವರಾಗಿದ್ದು ಕಾಂಗ್ರೆಸ್ ಪಕ್ಷ ನಿಷ್ಠರನ್ನು ನೀಡುವುದಿದ್ದರೆ ಭುಜಂಗ ಶೆಟ್ಟಿಯವರು ಸಮರ್ಥರು ಎನ್ನಲಾಗಿದೆ.

ಕೆಳ ಹಂತದ ಜನರೊಂದಿಗೆ ಬೆಳೆದ ಭುಜಂಗ ಶೆಟ್ಟಿ ಅವರು ಮತ್ತೆ ರಾಜಕೀಯವಾಗಿ ತಾಲೂಕು ಪಂಚಾಯತಿ ಸದಸ್ಯರಾಗಿ ಉಡುಪಿ ಜಿಲ್ಲೆ ಆಗುವ ಮೊದಲು ದಕ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಉಡುಪಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಕರಾವಳಿಯ ಎರಡೂ ಜಿಲ್ಲೆಯನ್ನು ಬಲ್ಲವರಾಗಿದ್ದ ಕಾರಣ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರು ಭುಜಂಗ ಶೆಟ್ಟಿಯವರನ್ನೆ ಕಣಕ್ಕಿಳಿಸಿದಲ್ಲಿ ಪ್ರಬಲ ಬಂಟ ಸಮುದಾಯ ಮತ್ತು ಕಾಂಗ್ರೆಸ್ ನಿಷ್ಟರಿಂದ ಗೆಲುವು ಸಾಧ್ಯವಾಗಲಿದೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ನಂಬಿಕೆಯಾಗಿದೆ.
ಆ ಕುರಿತು ಭುಜಂಗ ಶೆಟ್ಟರು ರಾಜ್ಯದ ಎಲ್ಲಾ ಮುಖಂಡರನ್ನು ಭೇಟಿಯಾಗಿ ಕಳೆದ ಕೆಲವು ದಿನದಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬೆಂಗಳೂರಿನಲ್ಲಿದ್ದು ಕೊನೆ ಕ್ಷಣದಲ್ಲಿ ರಾಜೇಂದ್ರ ಕುಮಾರರಿಗೆ ಪಕ್ಷ ಸೀಟು ನೀಡಿದ ಹಿನ್ನೆಲೆಯಲ್ಲಿ ವಾಪಾಸಾಗಿದ್ದರು. ಆದರೆ ಇದೀಗ ರಾಜೇಂದ್ರ ಕುಮಾರ್ ಹಿಂದೆ ಸರಿದಿರುವ ಕಾರಣ ಶೆಟ್ರನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಕಾಂಗ್ರೆಸ್ ? ಇಲ್ಲವೇ ಸ್ವತಂತ್ರ ಅಭ್ಯರ್ಥಿ? :
ಆ ಕುರಿತು ಅವರ ಸಮೀಪವರ್ತಿಗಳನ್ನು ಸಂಪರ್ಕಿಸಿದಾಗ ಪಕ್ಷ ಅವರಿಗೆ ಟಿಕೇಟು ನೀಡುತ್ತದೆ ಎನ್ನುವ ಬರವಸೆ ಇದೆ. ಒಂದೊಮ್ಮೆ ಸಿಗದಿದ್ದರೆ ಸೋಮವಾರ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಸಿದ್ಧತೆ ಮಾಡುತ್ತಾರೆ ಎಂದು ತಿಳಿದು ಬಂದಿದೆ.
25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.



































