ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಅನಿರೀಕ್ಷಿತ ರೀತಿಯಲ್ಲಿ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದು ವ್ಯಾಪಕ ಬೆಳೆಹಾನಿಯಾಗಿದೆ. ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಬೆಳೆ ನಾಶದ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.
ದೇಶಾದ್ಯಂತ ಮಳೆಯ ಪ್ರಮಾಣ ಹೆಚ್ಚಿದೆ. ನಿರೀಕ್ಷೆ ಮಾಡದ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಭತ್ತ ರಾಗಿ ಜೋಳ ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿದೆ. ಭತ್ತ ಒಣಗಿಸಲಾಗದ ಪರಿಸ್ಥಿತಿ ಎದುರಾಗಿದೆ. ಅಗ್ರಿಕಲ್ಚರ್ ಇನ್ಪ್ರಾಸ್ಟ್ರಕ್ಚರ್ ಫಂಡ್ ನಿಂದ ಡ್ರೈಯರ್ ಖರೀದಿಗೆ ಕೇಂದ್ರ ವ್ಯವಸ್ಥೆ ಮಾಡಲಿದೆ. ವೇರ್ ಹೌಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೊಸ ತಂತ್ರಜ್ಞಾನ ಬಳಸಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಚನೆ ಕೊಡಲಾಗಿದೆ ಎಂದರು.

ಬಿಟ್ ಕಾಯಿನ್ ದುರ್ಬಳಕೆಯಾಗ ಬಾರದು:
ಬಿಟ್ ಕಾಯಿನ್ ಬಗ್ಗೆ ಎಲ್ಲ ರಾಷ್ಟ್ರಗಳು ಯೋಚಿಸಬೇಕಾಗಿದೆ. ಬಿಟ್ ಕಾಯಿನ್ ನ ಹಣ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಮನಿ ಟ್ರಾಫಿಕಿಂಗ್ ಮತ್ತು ಭಯೋತ್ಪಾದನೆಗೆ ಹಣ ಬಳಕೆಯಾಗದಂತೆ ನೋಡಿಕೊಳ್ಳಬೇಕು. ದೇಶದ್ರೋಹಿಗಳ ಕೈಗೆ ಬಿಟ್ ಕಾಯಿನ್ ವ್ಯವಸ್ಥೆ ಹೋಗಬಾರದು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ಮೋದಿ ಈ ಕುರಿತು ಮಾತನಾಡಿದ್ದಾರೆ.
ಬಿಟ್ ಕಾಯಿನ್ ನಿಷೇಧ ಮಾಡಬೇಕಾ? ಅಥವಾ ಕ್ರಮಬದ್ಧಗೊಳಿಸಬೇಕಾ? ಪ್ರಧಾನಿ ಮೋದಿ ಮುಂಚೂಣಿಯಲ್ಲಿ ನಿಂತು ಎಲ್ಲ ರಾಷ್ಟ್ರಗಳ ಪ್ರಮುಖರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂದರು.
