Connect with us

Hi, what are you looking for?

Diksoochi News

ಕರಾವಳಿ

ಪೆರ್ಡೂರು ಮೇಳದಿಂದ ಹೊರ ನಡೆದ ಬಗ್ಗೆ ಸ್ಪಷ್ಟನೆ ನೀಡಿದ ಜನ್ಸಾಲೆ ರಾಘವೇಂದ್ರ ಆಚಾರ್ಯ

0

ವರದಿ : ದಿನೇಶ್ ರಾಯಪ್ಪನಮಠ

ಬಡಗುತಿಟ್ಟಿನ ಪ್ರಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಒಂಭತ್ತು ವರ್ಷಗಳಿಂದ ಯಕ್ಷಗಾನ ಸೇವೆ ಮಾಡಿದ ಪೆರ್ಡೂರು ಮೇಳದಿಂದ ಹೊರ ನಡೆದಿದ್ದಾರೆ. ಜನ್ಸಾಲೆ ಅವರ ಈ ನಿರ್ಧಾರ ನಿರ್ಧಾರ ಯಕ್ಷಕಲಾ ಅಭಿಮಾನಿಗಳಲ್ಲಿ ದಿಗ್ಭಮ್ರೆ ಮೂಡಿಸಿದೆ. ಊಹಾಪೋಹಗಳು ಹರಿದಾಡಿದ್ದವು. ಈ ಬಗ್ಗೆ ಸ್ವತಃ ಜನ್ಸಾಲೆ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ಒಂಭತ್ತು ವರ್ಷಗಳ ಕಾಲ ಪ್ರಧಾನ ಭಾಗವತನಾಗಿ ಸೇವೆ ಸಲ್ಲಿಸುತ್ತಿದ್ದ ಪೆರ್ಡೂರು ಶ್ರೀ ಅನಂತಪದ್ಮನಾಭ ಮೇಳದಿಂದ ನನ್ನನ್ನು ಈ ವರ್ಷ ಏಕಾಏಕಿ ಕೈ ಬಿಡಲಾಗಿದೆ.  ಈ ಕುರಿತು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಮಾಹಿತಿಗಳು ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ಘಟನೆಯ ಒಟ್ಟು ವಿವರ ನೀಡುವುದು ಹಾಗೂ ಗೊಂದಲ ಪರಿಹರಿಸುವ ಪ್ರಯತ್ನವನ್ನು ಮಾಡುತ್ತೇನೆ.

Advertisement. Scroll to continue reading.

ಮಾಜಿ ಧರ್ಮದರ್ಶಿ ಚಿತ್ತೂರು ಮಂಜಯ್ಯ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಭಾಗವತನಾಗಿದ್ದ ನನ್ನನ್ನು ಅಭಿಮಾನಿಗಳು ಗುರುತಿಸುತ್ತಿದ್ದುದು ಹಾಗೂ ಆದರಿಸುತ್ತಿದ್ದುದನ್ನು ಗಮನಿಸಿ ವೈ. ಕರುಣಾಕರ ಶೆಟ್ಟಿ ಅವರು, ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ನಿವೃತ್ತರಾಗುತ್ತಿರುವ ವೇಳೆಗೆ ಪೆರ್ಡೂರು ಮೇಳದ ಪ್ರಧಾನ ಭಾಗವತನಾಗಿ ನಿಯುಕ್ತಿ ಮಾಡಿದರು. ಅವರು ನೀಡಿದ ಸದವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ನನ್ನ ತಿರುಗಾಟದ ಅವಧಿಯಲ್ಲಿ 9 ವರ್ಷಗಳ ಕಾಲ ಹಿಮ್ಮೇಳ, ಮುಮ್ಮೇಳ ಕಲಾವಿದರ ಜತೆ ಸೌಹಾರ್ದಯುತವಾಗಿ ಕಲಾಯಾನ ಸವೆಸಿದ್ದೇನೆ.
ಶ್ರೇಷ್ಠ ಪ್ರಸಂಗಕರ್ತರಾದ ಪ್ರೊ| ಪವನ್ ಕಿರಣ್‌ಕೆರೆ ಅವರ  ಮೇಘರಂಜಿನಿ, ಶಂಕರಾಭರಣ, ಗಗನತಾರೆ, ಗೋಕುಲಾಷ್ಟಮಿ, ಕ್ಷಮಯಾಧರಿತ್ರಿ, ಶತಮಾನಂ ಭವತಿ, ಅಹಂ ಬ್ರಹಾಸ್ಮಿ, ಮಾಸನಗಂಗಾ, ಶಪ್ತಭಾಮಿನಿ ಇಷ್ಟಲ್ಲದೇ ಮಣೂರು ವಾಸುದೇವ ಮಯ್ಯ ವಿರಚಿತ ಇಂದ್ರನಾಗ, ಪುಷ್ಪಸಿಂದೂರಿ, ದೇವಗಂಗೆ, ಸೂರ್ಯಸಂಕ್ರಾಂತಿ ಮೊದಲಾದ ಪ್ರಸಂಗಗಳು, ಇತರ ಪೌರಾಣಿಕ ಪ್ರಸಂಗಗಳು, ಈ ಹಿಂದೆ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಪ್ರಸಂಗಗಳನ್ನು ಚ್ಯುತಿಯಾಗದಂತೆ ಆಡಿಸಿದ್ದೇನೆ. ಪ್ರಸಂಗಕಥೆಯಲ್ಲಿರುವ ಸತ್ವ, ಸಂದೇಶಗಳಿಗೆ ಅನುಗುಣವಾಗಿ ಭಾಗವತಿಕೆ ಹಾಗೂ ನಿರ್ದೇಶನ ಮಾಡಿ ಪ್ರಸಂಗಕ್ಕೆ ನ್ಯಾಯ ಒದಗಿಸಿದ್ದನ್ನು ಪ್ರಸಂಗಕರ್ತರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಗ ಕರುಣಾಕರ ಶೆಟ್ಟಿ ಅವರು, ನಾನು ಮೇಳ ನಡೆಸಿದಷ್ಟೂ ವರ್ಷ ನೀನೇ ನನ್ನ ಮೇಳದ ಪ್ರಧಾನ ಭಾಗವತ ಎಂದು ಬೆನ್ತಟ್ಟಿ ಹರಸಿದ್ದರು.
ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಯಕ್ಷಗಾನದ ತಿರುಗಾಟಕ್ಕೆ ಸಮಸ್ಯೆಯಾಗಿತ್ತು. ಎಲ್ಲ ಸರಿಯಾಗಿ ಈ ವರ್ಷದ ತಿರುಗಾಟ ಸಸೂತ್ರವಾಗಿ ನಡೆಯಲಿದೆ ಎನ್ನುವಾಗ ಪೆರ್ಡೂರು ಮೇಳದಲ್ಲಿ ಜನ್ಸಾಲೆ ಇಲ್ಲ ಎಂಬ ವದಂತಿಗಳು ಹಬ್ಬಿದವು. ಯಜಮಾನರ ಜತೆ ಸ್ಪಷ್ಟನೆ ಬಯಸಿದಾಗ, ಈ ವರ್ಷ ಮೇಳ ತಿರುಗಾಟ ಸಂದರ್ಭ ಬೇರೆ ಪ್ರದರ್ಶನಗಳಿಗೆ ತೆರಳಲು ಅವಕಾಶ ಇಲ್ಲ, ಹೊರಗಿನ ಪ್ರದರ್ಶನಗಳೂ ನಮ್ಮ ಮೇಳದ ಮುಖಾಂತರವೇ ನಡೆಯುವುದಿದ್ದರೆ ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದ ಮೇರೆಗೆ ನಾನು ಈ ತಿರುಗಾಟಕ್ಕೆ ಅವರ ಷರತ್ತುಗಳಿಗೆ ಒಪ್ಪಿದ್ದೆ. ಪ್ರಕಟನೆಯೂ ಹೊರಬಿದ್ದಿತ್ತು. ಈ ವರ್ಷದ ನೂತನ ಪ್ರಸಂಗದ ಪ್ರದರ್ಶನಪೂರ್ವ ತಯಾರಿಯಲ್ಲೂ ಭಾಗವಹಿಸಿದ್ದೆ. ಮೇಳದ ಆಟ ಆಡಿಸುವ ಕಂಟ್ರಾಕ್ಟುದಾರರು ನಾನೇ ಪ್ರಧಾನ ಭಾಗವತ ಎಂದು ಕರಪತ್ರಗಳನ್ನೂ ಮುದ್ರಿಸಿ ಹಂಚಿದ್ದರು.
ಮೇಳ ತಿರುಗಾಟದ ಆಸುಪಾಸಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ದೂರದ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಕಲಾವಿದನಿಗೆ ಸೇವೆ ಮಾಡಲು ಶಕ್ತಿಯಿದ್ದಾಗ ಕಲಾಸೇವೆ ಮಾಡಬೇಕು. ನಿವೃತ್ತಿಯ ಬಳಿಕ ಹಾಗೂ ಜೀವನೋಪಾಯಕ್ಕೆ ಕಲಾಸೇವೆಯೊಂದೇ ನಮಗಿರುವ ದಾರಿ ಎಂದು,  ಕಾರ್ಯಕ್ರಮಕ್ಕೆ ಅವಕಾಶ ಬಂದಾಗ ಸಂಘಟಕರ ಬಳಿ ಮೇಳದ ಯಜಮಾನರ ಬಳಿ ಮಾತನಾಡುವಂತೆ ತಿಳಿಸಿದ್ದೆ. ಆದರೆ ಸಂಘಟಕರಿಗೆ ಮೇಳದ ಯಜಮಾನರು ನನ್ನನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ ಎಂದು  ತಿಳಿಯಿತು. ಇದನ್ನು ಪ್ರಶ್ನಿಸಿದಾಗ ಯಾವುದೇ ಹೊರಗಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಮೇಳ ತಿರುಗಾಟ ಆರಂಭಿಸಲು 10 ದಿನಗಳು ಇರುವಾಗ ಮೇಳಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಕಲಾವಿದನಾಗಿ ಮೇಳನಿಷ್ಠೆ  ತೋರಿಸಬೇಕು, ಮೇಳದ ವ್ಯವಸ್ಥೆಗೆ ಕೊನೆ ಕ್ಷಣದಲ್ಲಿ ಧಕ್ಕೆ ಬರಬಾರದು, ಮೇಳವನ್ನು ನಂಬಿಕೊಂಡ ಇತರ ಕಲಾವಿದ, ಸಿಬಂದಿಗೆ ತೊಂದರೆಯಾಗಬಾರದು  ಎಂದು ನಾನು ಮೇಳದ ಯಜಮಾನರ ಎಲ್ಲ ಶರತ್ತುಗಳಿಗೂ ಒಪ್ಪಿ, ಹೊರಗಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದೆ. ಅದರ ಮರುದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಕರೆ ಮಾಡಿದ ಕರುಣಾಕರ ಶೆಟ್ಟರು, ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ನಾನು ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದು ಬಿಟ್ಟರು. ಇದು ನನಗೆ ದಿಗಿಲಾಯಿತು.   ಇಂತಹ ದಿಢೀರ್ ಬದಲಾವಣೆಗೆ ಕಾರಣ ಏನು ಎನ್ನುವ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಜಮಾನರ ಎಲ್ಲ ಶರತ್ತುಗಳಿಗೆ ಒಪ್ಪಿ ಈ ತಿರುಗಾಟ ನಡೆಸಲು ಬದ್ಧನಾದ ಮೇಲೂ ಏಕಾಏಕಿ ಮೇಳದಿಂದ ಕೈ ಬಿಟ್ಟದ್ದರ ಹಿನ್ನೆಲೆ ನನಗಷ್ಟೇ ಅಲ್ಲ ಬಹುತೇಕ ಯಕ್ಷಗಾನ ಪ್ರಿಯರಿಗೆ ಗೊಂದಲ ಮೂಡಿಸಿದೆ. ಎಲ್ಲ ಮೇಳಗಳು ತಿರುಗಾಟದ ಸಿದ್ಧತೆಯಲ್ಲಿರುವಾಗ, ಕೆಲವು ಮೇಳಗಳು ತಿರುಗಾಟ ಆರಂಭಿಸಿರುವಾಗ ನನ್ನನ್ನು ಯಾವುದೇ ಮೇಳಕ್ಕೆ ಸೇರದಂತೆ ಕಟ್ಟಿಹಾಕಿದಂತಾಗಿದೆ. ಆದ್ದರಿಂದ ಇಂತಹ ಸಂಕಷ್ಟದ ಪರಿಸ್ಥಿತಿ, ನನಗಾದ ಅನ್ಯಾಯ ಬೇರೆ ಯಾವುದೇ ಹಿರಿ ಕಿರಿಯ ಕಲಾವಿದರಿಗೆ ಎಂದೆಂದೂ ಒದಗಿ ಬರಬಾರದು ಎನ್ನುವುದು ನನ್ನ ಪ್ರಾರ್ಥನೆ. ಈ ಸಂದರ್ಭದಲ್ಲಿ ಬೇರೆ ಬೇರೆ ಮೇಳಗಳಿಂದ ನನಗೆ ಆಹ್ವಾನ ಬಂದರೂ ಕೊನೆ ಹಂತದಲ್ಲಿ ಅಲ್ಲಿನ ವ್ಯವಸ್ಥೆಗೆ ತೊಂದರೆಯಾಗಬಾರದು, ಅಲ್ಲಿನ ಕಲಾವಿದರಿಗೆ ಇರಿಸುಮುರುಸು ಆಗಬಾರದು ಎಂದು ನಾನು ಯಾವುದೇ ಮೇಳದ ಜತೆಗೂ ಒಪ್ಪಂದ ಮಾಡಿಕೊಳ್ಳಲಿಲ್ಲ. ಒಬ್ಬ ಪ್ರಸಿದ್ಧ ಭಾಗವತ ಮೇಳ ಇಲ್ಲದೇ ಇರಬಾರದು ಎಂಬ ಕಾಳಜಿಯಿಂದ ನನಗೆ ಆಹ್ವಾನ ಇತ್ತ ಎಲ್ಲರಿಗೂ ನಾನು ಋಣಿ. ಯಾವುದೇ ಮೇಳದವರು, ಸಂಘಟಕರು ಆಹ್ವಾನಿಸಿದರೂ ಮೇಳದ ಆಡಳಿತ ಹಾಗೂ ಕಲಾವಿದರ ಸಹಮತದ ಮೇರೆಗೆ ನಾನು ಪ್ರೀತಿಯಿಂದ ಭಾಗವಹಿಸಲು ಸಿದ್ಧನಿದ್ದೇನೆ. ಉಳಿದಂತೆ ಗಾನವೈಭವ, ತಾಳಮದ್ದಳೆಗಳಲ್ಲಿ ಸಿಕ್ಕೇ ಸಿಗುತ್ತೇನೆ.
9 ವರ್ಷಗಳ ಕಾಲ ನನಗೆ ಅನ್ನದ ಋಣ ನೀಡಿದ, ನನ್ನ ಪ್ರಸಿದ್ಧಿಯ ಕಿರೀಟಕ್ಕೆ ಗರಿ ತೊಡಿಸಿದ ಪೆರ್ಡೂರು ಮೇಳದ ಮುಂದಿನ ತಿರುಗಾಟ ಯಶಸ್ವಿಯಾಗಿ ನಡೆಯಲಿ.
ಈವರೆಗೆ ನನ್ನ ಜತೆಗಿದ್ದ  ಮೇಳದ ಯಜಮಾನರು, ಸರ್ವ ಕಲಾವಿದರು, ಸಿಬಂದಿಗೆ ನಾನು ನಂಬಿದ ಬ್ರಹ್ಮಲಿಂಗೇಶ್ವರ ಹಾಗೂ ಪದುಮನಾಭ ಸ್ವಾಮಿ ಒಳ್ಳೆಯದನ್ನು ಮಾಡಲಿ. ಹೊಸದಾಗಿ ಮತ್ತೆ ಮೇಳಕ್ಕೆ ಆಗಮಿಸಿದ ಧಾರೇಶ್ವರ ಭಾಗವತರಿಗೆ ಶುಭಹಾರೈಸುವೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಕುರಿತಾಗಲೀ, ಮೇಳದ ಕುರಿತಾಗಲೀ, ಧಾರೇಶ್ವರ ಭಾಗವತರ ಕುರಿತಾಗಲೀ ಯಾರೂ ಋಣಾತ್ಮಕ ಸಂದೇಶಗಳನ್ನು ಹಾಕಬಾರದಾಗಿ ಈ ಮೂಲಕ ವಿನಂತಿಸುತ್ತೇನೆ. ಮೇಳದ ಯಾವುದೇ ಕಲಾವಿದರಿಗೆ, ಕಾರ್ಯಕ್ರಮಕ್ಕೆ ತೊಂದರೆ ನೀಡಬಾರದಾಗಿ ನನ್ನ ಕಳಕಳಿಯ ವಿನಂತಿ” ಎಂದು ಅವರು ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!