ವರದಿ : ದಿನೇಶ್ ರಾಯಪ್ಪನಮಠ
ಕೋಟ: ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ, ಸಾಲಿಗ್ರಾಮ ಇಲ್ಲಿ ಗುರುವಾರದಂದು ಕಾರಂತರ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು.
ಡಾ. ಕಾರಂತರ ಭಾವಚಿತ್ರಕ್ಕೆ ಟ್ರಸ್ಟ್ ಅಧ್ಯಕ್ಷ ಕೋಟೇಶ್ವರ ಬಿ.ಎಂ. ಗುರುರಾಜ್ ರಾವ್ ಪುಷ್ಪನಮನ ಸಲ್ಲಿಸಿದರು. ಡಾ. ಕೋಟ ಶಿವರಾಮ ಕಾರಂತರ ಸ್ಮೃತಿ ಚಿತ್ರಶಾಲೆಯ ವೀಕ್ಷಣೆಯನ್ನು ಅವಕಾಶ ಕಲ್ಪಿಸುವುದರ ಜೊತೆಗೆ ಅತಿಥಿಗಳ ವೀಕ್ಷಣೆ ನಡೆಯಿತು

ಉಡುಪಿಯ ಖ್ಯಾತ ಲೆಕ್ಕ ಪರಿಶೋಧಕ,ವಿಶ್ವಸ್ಥ ಮಂಡಳಿಯ ಸದಸ್ಯ ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಡಾ. ಕಾರಂತ ಸಂಶೋಧನಾ ಕೇಂದ್ರದ ಕಾರಂತರ ಭಾವಚಿತ್ರಕ್ಕೆ ಪುಷ್ಯನಮನಗೈದು ಮಾತನಾಡಿ, ಕಾರಂತರು ನೇರ ನಡೆ ನುಡಿಯ ವ್ಯಕ್ತಿತ್ವವಿರುವ ವಿಶ್ವಮಾನ್ಯರು. ಅವರ ಕೊನೆಯ ದಿನಗಳನ್ನು ಸಾಲಿಗ್ರಾಮದ ಈ ಕೇಂದ್ರದಲ್ಲಿ ಕಳೆದಿದ್ದು ನೆನಪು ಮರೆಯಾಗದಂತೆ ಕಾರಂತರ ವಿಚಾರಧಾರೆಗೆ ಸಂಬಂಧಿಸಿದ ಅನೇಕ ವಸ್ತುಗಳು,ಅವರು ಉಪಯೋಗಿಸುತ್ತಿದ್ದ ಉಪಕರಣಗಳು, ನಡೆದುಬಂದ ದಾರಿಗಳ ಚಿತ್ರಮುಕುಟ ಮನಸೂರೆಗೊಳ್ಳುವಂತಿದೆ. ಇದು ಅವರ ಕಾಲಘಟ್ಟದ ನೆನಪಿಸುವುದರ ಜೊತೆಗೆ ಮುಂದಿನ ತಲೆಮಾರಿಗೆ ಬಹುಉಪಯೋಗಿ ಹಾಗೂ ಸಂಶೋಧನೆಗೆ ಪ್ರೇರಣೆಯಾಗಿದೆ. ಮುಂದಿನ 2022-23ನೇ ಸಾಲಿನಲ್ಲಿ ಚಟುವಟಿಕೆಯ ಕೇಂದ್ರವನ್ನಾಗಿಸಲು ಬೇಕಾದ ತಯಾರಿ ಈಗಾಲೇ ಸಿದ್ಧಪಡಿಸಿದ್ದೇವೆ. ಸರಕಾರ ಈ ಕುರಿತು ಅನುದಾನದ ಸಹಕಾರ ಒದಗಿಸುವುದರ ಜೊತೆಗೆ ಬೇಕಾದ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ,ನಿರ್ವಾಹಕ ವಿಶ್ವಸ್ಥರಾಗಿ ಬಿ. ಮಾಲಿನಿ ಮಲ್ಯ, ಉಪಾಧ್ಯಕ್ಷ ಶಿಕ್ಷಕ ಕಾರ್ಕಡ ನಾರಾಯಣ್ ಆಚಾರ್, ಕಾರ್ಯದರ್ಶಿ ಕೋಡಿ ಚಂದ್ರಶೇಖರ ನಾವಡ, ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಮಾಧವ ಪೈ, ಸದಸ್ಯ ಶಿರಿಯಾರದ ಕೈಗಾರಿಕೊದ್ಯಮಿ ಸಂದೀಪ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ 6:30ಕ್ಕೆ ಕಾವ್ಯಶ್ರೀ ಅಜೇರು ಇವರ ಭಾಗವತಿಕೆಯಲ್ಲಿ ಯಕ್ಷಾರಾಧನಾ ಕಲಾಕೇಂದ್ರ ರಿ. ಉರ್ವ ಮಂಗಳೂರು ಪ್ರಸ್ತುತಿ ಯಲ್ಲಿ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ. ನೃತ್ಯಪಥ ನೃತ್ಯನಿಕೇತನ ಕೊಡವೂರು ಫೆಸ್ಬುಕ್ ಪೇಜ್ ನಲ್ಲಿ ಪ್ರಸಾರಗೊಂಡಿತು.


































