ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕುಂದಾಪುರ ರೈಲು ನಿಲ್ದಾಣದಲ್ಲಿ ಪಿ ಆರ್ ಎಸ್ (PRS) ಟಿಕೇಟ್ ಬುಕ್ಕಿಂಗ್ ಸೌಲಭ್ಯಕ್ಕೆ ರೈಲ್ವೆ ಇಲಾಖೆ ಅಸ್ತು ಹೇಳಿದೆ. ಸುದೀರ್ಘ ಕಾಲದ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವಲ್ಲಿ ಸಚಿವೆ ಶೋಭಾ ಕರಂದ್ಲಾಜೆಯವರು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
ಸಚಿವೆ ಶೋಭಾ ಕರಂದ್ಲಾಜೆ ಮನವಿಯ ಮೇರೆಗೆ ಹೆಚ್ಚುವರಿಯಾಗಿ ಕುಂದಾಪುರ ನಿಲ್ದಾಣದಲ್ಲಿಯೇ ಹೊಸ ಪಿ ಆರ್ ಎಸ್ (PRS) ವ್ಯವಸ್ಥೆ ಆರಂಭಿಸಲು ರೈಲ್ವೇ ಮಂಡಳಿ ಕೊಂಕಣ ರೈಲ್ವೆಗೆ ಸೂಚನೆ ನೀಡಿದೆ.

ಪ್ರಸ್ತುತ ಕುಂದಾಪುರ ಪೋಸ್ಟ್ ಆಫೀಸ್ ಪಿ ಅರ್ ಎಸ್ ನಲ್ಲಿನ ತಾಂತ್ರಿಕ ಸಮಸ್ಯೆಗಳು, ರಜಾ ದಿನಗಳ ಅಲಭ್ಯತೆ, ಇತರ ಟಿಕೇಟ್ ಸಂಬಂದಿ ಕೆಲಸಗಳಾದ ರದ್ದತಿ, ಬದಲಾವಣೆ ಇತ್ಯಾದಿ ಚಟುವಟಿಕೆಗಳ ಕೊರತೆ ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯವರಿಗೆ ಮನವಿ ಮಾಡಿದ್ದರು.
ಉದ್ಯೋಗ ಹಾಗು ಉದ್ಯಮಕ್ಕಾಗಿ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಜತೆಗೆ, ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆಯಂತ ಪ್ರಸಿದ್ದ ತೀರ್ಥ ಕ್ಷೇತ್ರಗಳ ಹತ್ತಿರದ ಹಾಗು ಪ್ರವಾಸಿ ನಿಲ್ದಾಣವಾದ ಕುಂದಾಪುರ ನಿಲ್ದಾಣಕ್ಕೆ ಬರುವ ದೂರ ಪ್ರಯಾಣಿಕರಿಗೂ ವಾರದ ಎಲ್ಲಾ ದಿನ ಟಿಕೇಟ್ ರೈಲ್ವೆ ನಿಲ್ದಾಣದಲ್ಲಿಯೇ ಸಿಗಬೇಕಾದ ಅನಿವಾರ್ಯತೆ ಇತ್ತು. ಜತೆಗೆ ಪಿ ಆರ್ ಎಸ್ ಬಂದರೆ, ರೈಲ್ವೆ ನಿಲ್ದಾಣದಲ್ಲಿಯೇ ಜೀವನೋಪಾಯ ಹೊಂದಿರುವ ರಿಕ್ಷಾ, ಅಂಗಡಿ, ಕ್ಯಾಂಟೀನ್ ಗಳಿಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಭರವಸೆ ಇದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಚಿವೆ ಶೋಭಾ ಕರಂದ್ಲಾಜೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗು ರೈಲು ಮಂಡಳಿಯ ಅಧಿಕಾರಿಗಳಿಗೆ ಸಂಪರ್ಕಿಸಿ, ಕುಂದಾಪುರ ನಿಲ್ದಾಣದಲ್ಲಿ ಪಿ ಆರ್ ಎಸ್ ಆರಂಭಿಸಲು ಮನವಿ ಮಾಡಿದ್ದರು. ಕೊಂಕಣ ರೈಲ್ವೆಯು ತಕ್ಷಣದಲ್ಲಿಯೇ ಪಿ ಆರ್ ಎಸ್ (PRS) ವ್ಯವಸ್ಥೆಯನ್ನು ತಕ್ಷಣದಲ್ಲೇ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಿದೆ.


































