ಕುಂದಾಪುರ: ಮೊಬೈಲ್ ಆ್ಯಪ್ ಮೂಲಕ ಮಾಡಿಕೊಂಡಿದ್ದ ಸಾಲವನ್ನು ಮರುಪಾವತಿಸಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ಹರೆಗೋಡು ಕೊಳಹಿತ್ಲು ಸಂಜೀವ ದೇವಾಡಿಗ ಎಂಬವರ ಪುತ್ರ ವಿಘ್ನೇಶ್ ದೇವಾಡಿಗ(25) ಆತ್ಮಹತ್ಯೆ ಮಾಡಿಕೊಂಡ ಯುವಕ.
ಬೆಳಿಗ್ಗೆ ಐದು ಗಂಟೆ ಸುಮಾರಿಗೆ ವಿಘ್ನೇಶ್ ತಾಯಿ ಮನೆಯ ಬಾಗಿಲು ತೆರೆದಿದ್ದಾರೆ. ಅನುಮಾನಗೊಂಡು ಹೊರಗಡೆ ನೋಡಿದ್ದಾರೆ. ಈ ವೇಳೆ ಮನೆ ಎದುರಿನ ಮರಕ್ಕೆ ವಿಘ್ನೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಘ್ನೇಶ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಬಳಿಕ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸ್ನೇಹಿತನೊಂದಿಗೆ ಸೇರಿ ಬ್ರಹ್ಮಾವರದ ಬಳಿ ಚಪ್ಪಲಿ ಹೋಲ್ ಸೇಲ್ ಅಂಗಡಿ ತೆರೆದಿದ್ದರು. ಉದ್ಯಮಕ್ಕೆ ಬಂಡವಾಳ ಹೂಡಲು ಮೊಬೈಲ್ ಫೈನಾನ್ಸ್ ಮೂಲಕ ಸಾಲ ಪಡೆದಿದ್ದರು ಎನ್ನಲಾಗಿದೆ. ವ್ಯವಹಾರ ತಕ್ಕ ಮಟ್ಟಿಗೆ ಕೈಹಿಡಿಯಲಿಲ್ಲ ಎಂದು ತಿಳಿದು ಬಂದಿದೆ. ಸಾಲ ನೀಡಿದ ಫೈನಾನ್ಸ್ ನಿಂದ ಮರುಪಾವತಿಗೆ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಡೆತ್ ನೋಟ್ ನಲ್ಲಿ ವಿಘ್ನೇಶ್ ಉಲ್ಲೇಖಿಸಿದ್ದಾರೆ. ಪ್ರಕರಣದ ಸಂಬಂಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ದಿನೇಶ್ ರಾಯಪ್ಪನಮಠ



































