ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಸಮಾಲೋಚನೆಯ ಸಭೆ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಗುರುವಾರ ಸಂಜೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ನ ಚುನಾಯಿತ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅನುಪಸ್ಥಿತಿಯಲ್ಲಿ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಡಿಸೆಂಬರ್ ೨೮ರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ಸಮಾಲೋಚನೆಯ ಸಭೆ ೫ ಗಂಟೆಗೆ ನಡೆಯಲಿದೆ ಎಂಬ ಮಾಹಿತಿಯು ವಾಟ್ಸಾಪ್ ಮೂಲಕ ಹರಿದಾಡಿತ್ತು. ಬಳಿಕ ಅದೇ ಮಾಹಿತಿಯು ಕಂಪ್ಯೂಟರ್ ನಲ್ಲಿ ವಿನ್ಯಾಸಗೊಳಿಸಿದ ಕರಪತ್ರದಂತೆ ಮತ್ತೇ ಮಾಹಿತಿಯು ಕೆಲವೊಂದು ಮಂದಿಗೆ ರವಾನೆಯಾಯಿತು. ಡಿಸೆಂಬರ್ ೩೦ರ ಮಧ್ಯಾಹ್ನದ ಬಳಿಕ ಸಭೆಯು ಬದಲಾದ ಸಮಯದಲ್ಲಿ ಸಂಜೆ ೬.೩೦ಕ್ಕೆ ನಡೆಯಲಿದೆ ಎಂದು ಮತ್ತೋಮ್ಮೆ ಮಾಹಿತಿಯು ವಾಟ್ಸಾಪ್ ಮೂಲಕ ಕೆಲವು ಮಂದಿಗೆ ರವಾನೆಯಾಯಿತು.

ಅಂತು ೬.೩೫ ನಿಮಿಷಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ ಜೊತೆಗೂಡಿ ಸಭಾಭವನ ಪ್ರವೇಶಿಸಿದರು.
ಅವರು ಬರುತ್ತಿದ್ದಂತೆ ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾದ ನಿವೃತ್ತ ಶಿಕ್ಷಕ ಎಚ್. ರಾಜೀವ ಶೆಟ್ಟಿಯವರು ಸಭೆ ನಡೆಸುವ ನಿಮಗೆ ಒಂದು ನೀತಿ ನಿಯಮ ಇಲ್ಲವೇ ನಾವೆಲ್ಲ ೫ ಗಂಟೆಯಿಂದ ಕಾಯುತ್ತಿದ್ದೇವೆ. ನಾನೊಬ್ಬ ಹಿರಿಯ ಸದಸ್ಯ. ನನಗೂ ಸಹಿತ ಹೆಬ್ರಿ ತಾಲೂಕಿನ ಕಸಾಪ ಬಹುತೇಕ ಸದಸ್ಯರಿಗೆ ಸಭೆಯ ಮಾಹಿತಿ ಇಲ್ಲ. ಇದು ಯಾಕೆ ಹೀಗೆ. ಘಳಿಗೆ ಘಳಿಗೆ ಸಭೆಯ ಸಮಯ ಬದಲು ಮಾಡುತ್ತೀರಿ. ಇದೇಕೆ ಮಕ್ಕಳಾಟಿಯ, ಜಿಲ್ಲಾಧ್ಯಕ್ಷರು ಎಲ್ಲಿದ್ದಾರೆ? ಅವರು ಬರುವುದಿಲ್ಲ ಎಂದು ಗೊತ್ತಿದ್ದ ಮೇಲೆ ಯಾಕೆ ಸಭೆ ಕರೆದಿದ್ದೀರಿ. ಗೌರವಾನಿತ್ವ ಪುರಾತನವಾದ ಸಂಸ್ಥೆಯನ್ನು ಮುನ್ನಡೆಸುವ ನಿಮಗೆಲ್ಲ ರೀತಿ ರಿವಾಜು ಇಲ್ಲವೆ, ಇದೆಲ್ಲ ಸರಿಯಲ್ಲ. ಸಾಹಿತ್ಯ ಪರಿಷತ್ ಅಜೀವ ಸದಸ್ಯರಾದ ನಾವೆಲ್ಲ ಪರಿಷತ್ ಘಟಕಗಳಿಗೆ ಬೇಡವೇ, ಮುಂದೆ ಹೆಬ್ರಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸರ್ವಸದಸ್ಯರ ಸಮ್ಮುಖದಲ್ಲೇ ಎಲ್ಲಾ ಸಭೆಗಳು, ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ನಡೆಯಬೇಕು, ಎಲ್ಲ ಸದಸ್ಯರಿಗೂ ಎಲ್ಲಾ ಮಾಹಿತಿಗಳು ರವಾನೆಯಾಗಬೇಕು, ಎಲ್ಲಾ ನೀವೆ ಮಾಡುವುದಾದರೇ ಸದಸ್ಯರಾದ ನಾವೆಲ್ಲ ಯಾಕೆ, ನೀವೇ ಮಾಡಿಬಿಡಿ ಎಂದು ಪ್ರಶ್ನಿಸಿದರು.

ಹಿರಿಯರಾದ ರಾಜೀವ ಶೆಟ್ಟಿ ಅವರ ಪ್ರಶ್ನೆಗೆ ಸಮಜಾಯಿಷಿ ಉತ್ತರ ನೀಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಯಾವುದೇ ಸಮಸ್ಯೆಯನ್ನು ಒಡಲಿಗೆ ತೆಗೆದುಕೊಳ್ಳಬೇಡಿ. ನಾವು ಬರುವಾಗ ವಿಳಂಬ ಆಗಿದೆ. ಎಲ್ಲರೂ ಕನ್ನಡದ ಸೇವೆ ಮಾಡುವವರೇ, ಜಿಲ್ಲಾಧ್ಯಕ್ಷರಿಗೆ ಕಳೆದ ಎರಡು ದಿನಗಳಿಂದ ಅನಾರೋಗ್ಯ ಇದೆ, ೧೦ ನಿಮಿಷದಲ್ಲಿ ಬಂದರೂ ಬರಬಹುದು, ಬರದೆಯೂ ಇರಬಹುದು,ಅವರು ನನ್ನನ್ನು ಅವರ ಪರವಾಗಿ ಕಳಿಸಿದ್ದಾರೆ. ನಾವು ಸಭೆ ನಡೆಸುವ ಎಂದು ಮಾತು ಆರಂಭಿಸಿ, ಈಗ ಚುನಾವಣೆ ಮುಗಿದಿದೆ, ನೀಲಾವರ ಸುರೇಂದ್ರ ಅಡಿಗ ಚುನಾವಣೆಯಲ್ಲಿ ಜಯಗಳಿಸಿದ್ದಾರೆ, ಅವರು ಈಗ ಎಲ್ಲರ ಅಧ್ಯಕ್ಷರು, ನಮ್ಮೆಲ್ಲರ ಅಧ್ಯಕ್ಷರು, ನಾವು ಹೆಬ್ರಿ ತಾಲ್ಲೂಕು ಘಟಕವನ್ನು ರಚನೆ ಮಾಡುವುದು, ಮುಂದೆ ತಾಲೂಕು ಸಮ್ಮೇಳನಗಳನ್ನು ಮಾಡುವುದು ಹೀಗೆ ಹಲವು ವಿಚಾರಗಳನ್ನು ಚರ್ಚಿಸಬೇಕಿದೆ. ಅಧ್ಯಕ್ಷರ ಆಯ್ಕೆಯನ್ನು ನಡೆಸುವುದು ಜಿಲ್ಲಾಧ್ಯಕ್ಷರ ಪರಮಾಧಿಕಾರ, ನೀವು ಇಲ್ಲಿ ಸಭೆಯಲ್ಲಿ ನಿಮ್ಮ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ನಾವು ಜಿಲ್ಲಾಧ್ಯಕ್ಷರಿಗೆ ತಿಳಿಸುತ್ತೇವೆ, ಅಧ್ಯಕ್ಷರನ್ನು ಅವರೇ ಆಯ್ಕೆ ಮಾಡಿ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.
ಸುಬ್ರಹ್ಮಣ್ಯ ಶೆಟ್ಟಿ ಅವರ ಮಾತಿಗೆ ಸಭೆಯಲ್ಲಿದ್ದ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿ, ಎಲ್ಲವೂ ನೀವೇ ಮಾಡುವುದಾದರೆ ಮತ್ತೇ ಸಭೆಯನ್ನು ಯಾಕೆ ಕರೆದಿದ್ದೀರಿ. ಎಲ್ಲವೂ ನೀವೆ ಮಾಡಿ. ನಾವು ಏಕೆ ಎಂದು ಪ್ರಶ್ನಿಸಿದರು. ನಮಗೆ ಎಲ್ಲರೂ ಒಪ್ಪುವ ಸಮ್ಮತ ಆಯ್ಕೆ ಆಗಬೇಕು. ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರ ಸಭೆಯನ್ನು ಮತ್ತೊಮ್ಮೆ ಕರೆದು ಎಲ್ಲರ ಸಮ್ಮುಖದಲ್ಲಿ ಸರ್ವಸಮ್ಮತ ಆಯ್ಕೆ ನಡೆಯಬೇಕು, ಯಾರನ್ನೋ ನೀವೇ ಆಯ್ಕೆ ಮಾಡಿ ಇಲ್ಲಿ ಬಂದು ನೀವೆ ಪಟ್ಟಿ ಓದಿ ಘೋಷಣೆ ಮಾಡಿ ಹೇರಿಕೆ ಮಾಡುವುದು ಸರಿಯಲ್ಲ. ಈ ತನಕ ನಡೆದಿದ್ದು ಆಗಿದೆ, ಇನ್ನು ಮುಂದೆ ಎಲ್ಲವೂ ಪಾರದರ್ಶಕವಾಗಿ ನ್ಯಾಯಸಮ್ಮತವಾಗಿ ನಡೆಯಬೇಕಿದೆ. ಸಭೆಯಲ್ಲಿ ನಡೆಯದಿರುವ ಎಲ್ಲಾ ಚರ್ಚೆ ಬೆಳವಣಿಗೆ, ಅಭಿಪ್ರಾಯವನ್ನು ನಿರ್ಣಯಿಸಿ ಜಿಲ್ಲಾಧ್ಯಕ್ಷರಿಗೆ ತಿಳಿಸಿ ಸರ್ವಸಮ್ಮತ ಅಧ್ಯಕ್ಷರ ಆಯ್ಕೆ ಮಾಡಿ ಸಾಹಿತ್ಯ ಪರಿಷತ್ ಅನ್ನು ಗೌರವಯುತವಾಗಿ ಮುನ್ನಡೆಸಿ ಎಂದು ಸಭೆಯಲ್ಲಿದ್ದ ಸದಸ್ಯರು ಒಕ್ಕೋರಲಿನಿಂದ ಆಗ್ರಹಿಸಿದರು.
ನಿಮ್ಮ ಎಲ್ಲಾ ಅಭಿಪ್ರಾಯವನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತರುತ್ತೇವೆ, ಜನವರಿ ೭ರ ಒಳಗೆ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ನಡೆದು ರಾಜ್ಯ ಪರಿಷತ್‌ಗೆ ಕಳಿಸಬೇಕಿದೆ, ಇನ್ನೊಮ್ಮೇ ಸಭೆ ನಡೆಸುವುದು ಅನುಮಾನ, ಪರಿಷತ್ತಿನ ಎಲ್ಲಾ ಸದಸ್ಯರ ವಾಟ್ಸಾಪ್ ಗ್ರೂಫ್ ಮಾಡಿ ಮಾಹಿತಿ ನೀಡಿ ಚರ್ಚೆ ನಡೆಸುತ್ತೇವೆ ಎಂದು ಸುಬ್ರಹ್ಮಣ್ಯ ಶೆಟ್ಟಿ ಮತ್ತೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಸಾಹಿತ್ಯ ಸಂಘಟಕ ಮಾರ್ಗದರ್ಶಕರಾದ ಎಚ್. ಭಾಸ್ಕರ ಜೋಯಿಸ್ ಮಾತನಾಡಿ ಹೆಬ್ರಿ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳು ಸಾಂಗವಾಗಿ ನಡೆಯಬೇಕಿದೆ, ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವ ತಂಡದ ರಚನೆ ಆಗಬೇಕಿದೆ, ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಸದಸ್ಯರ ಸೇರಿಸುವ ಕೆಲಸ ಹೆಬ್ರಿ ತಾಲೂಕು ಘಟಕದಿಂದ ನಡೆಯಬೇಕು, ಎಲ್ಲರೂ ಒಪ್ಪುವ, ಸೇವೆ ಮಾಡುವ ಮನಸ್ಸಿನ ನ್ಯಾಯ ಸಮ್ಮತ ಅಧ್ಯಕ್ಷರ ಆಯ್ಕೆ ಸರ್ವಸದಸ್ಯರ ಸಮ್ಮುಖದಲ್ಲಿ ನಡೆಯಬೇಕಿದೆ ಸಲಹೆ ನೀಡಿದರು.
ಹಿರಿಯ ಸದಸ್ಯರಾದ ಕಬ್ಬಿನಾಲೆಯ ಶ್ರೀಧರ ಹೆಬ್ಬಾರ್ ಕಾಪೋಳಿ ಮಾತನಾಡಿ ಈಗ ಚುನಾವಣೆ ಮುಗಿದಿದೆ, ನೀಲಾವರ ಸುರೇಂದ್ರ ಅಡಿಗ ಬಗ್ಗೆ ಇನ್ನೊಂದು ಮಾತು ಇಲ್ಲ, ಯಾವ ಗ್ರೂಫ್ ನಮ್ಮಲ್ಲಿ ಇಲ್ಲ, ಕನ್ನಡ ಸಾಹಿತ್ಯ ಪರಿಷತ್ತೇ ನಮ್ಮ ಗ್ರೂಫ್, ಹೆಬ್ರಿ ತಾಲೂಕು ಘಟಕ ಚೆನ್ನಾಗಿ ಇರಬೇಕು, ಎಲ್ಲರೂ ಒಪ್ಪುವ ಸರ್ವಸಮ್ಮತವಾಗಿ ಸೌಹಾರ್ಧವಾಗಿ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ, ಪರಿಷತ್ತಿನ ಎಲ್ಲ ಸದಸ್ಯರೂ ಮುಖ್ಯ, ಎಲ್ಲರಿಗೂ ಸಮಾನ ಅವಕಾಶ ಇದೆ ಎಂದು ಅಭಿಪ್ರಾಯ ಮಂಡಿಸಿದಾಗ ಶ್ರೀಧರ ಹೆಬ್ಬಾರ್ ಕಾಪೋಳಿ ಅವರ ಅಭಿಪ್ರಾಯ ನಮ್ಮೆಲ್ಲರ ಅಭಿಪ್ರಾಯವೇ ಆಗಿದೆ ಎಂದು ಸಭೆಯಲ್ಲಿದ್ದ ಎಲ್ಲ ಸದಸ್ಯರೂ ಬೆಂಬಲಿಸಿದರು.
ಕಬ್ಬಿನಾಲೆ ಬಾಲಚಂದ್ರ ಹೆಬ್ಬಾರ್ ಮಾತನಾಡಿ ನನಗೆ ಅತ್ಯಂತ ಖುಷಿ ಮತ್ತು ಹೆಮ್ಮೆ ಆಗುತ್ತಿದೆ, ನಾನು ಮತಹಾಕಿದ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರು ಜಯಗಳಿಸಿದ್ದಾರೆ. ನಮ್ಮಲ್ಲಿ ಗೊಂದಲಗಳು ಬೇಡ ಸೌಹಾರ್ಧಯುತವಾಗಿ ಹೆಬ್ರಿ ತಾಲೂಕು ಘಟಕದ ರಚನೆಯಾಗಲಿ ಎಂದು ಅಭಿಪ್ರಾಯ ಮಂಡಿಸಿದರು.
ಕನ್ನಡಾಭಿಮಾನಿಯಾಗಿರುವ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ಕುಡಿಬೈಲ್ ಬೈಲ್ ರಾಜೇಶ್ ಮಾತನಾಡಿ ನಾವು ಎಲ್ಲಿ ಹೋದರೂ ಕಸಾಪ ಶಿಕ್ಷಕರು ಮತ್ತು ಮಕ್ಕಳ ಪರಿಷತ್ ಎಂಬ ಮಾತು ಬರುತ್ತದೆ, ನಾವು ಇದರಿಂದ ಹೊರಗೆ ಬರಬೇಕು, ಎಲ್ಲರನ್ನೂ ಒಗ್ಗೂಡಿಸಿ ಎಲ್ಲರ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ರೂಪಿಸಬೇಕಿದೆ ಎಂದು ತಿಳಿಸಿದರು.

ಹೆಬ್ರಿಯೂ ಅತ್ಯುತ್ತಮ ಸಾಹಿತ್ಯ ಕ್ಷೇತ್ರ ಇಲ್ಲಿ ಎಲ್ಲರೂ ಕನ್ನಡ ಮತ್ತು ಸಾಹಿತ್ಯದ ಸೇವೆ ಮಾಡುತ್ತೇವೆ, ಎಲ್ಲರೂ ಒಂದಾಗಿ ಕೆಲಸ ಮಾಡುವ ದಿನಮಾನಗಳು ನಮ್ಮದಾಗಲಿ ಎಂಬ ಆಶಯವನ್ನು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವ್ಯಕ್ತಪಡಿಸಿದರು.
ಹೆಬ್ರಿ ತಾಲ್ಲೂಕು ಘಟಕದ ಪೂರ್ವಾಧ್ಯಕ್ಷರಾದ ಪಿ.ವಿ.ಆನಂದ ಸಾಲಿಗ್ರಾಮ ಮಾತನಾಡಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದಕ್ಕೆ ಸಾರ್ಥಕ ಮನೋಭಾವ ಇದೆ. ಎಲ್ಲರಿಗೂ ಸಮಧಾನ ಆಗಿದೆ ಅನಿಸುವುದಿಲ್ಲ. ನನ್ನ ಶಕ್ತಿಯನುಸಾರ ಕೆಲಸ ಮಾಡಿದ್ದೇನೆ, ಮುಂದೆ ಬರುವ ಅಧ್ಯಕ್ಷರಿಗೂ ನನ್ನಿಂದ ಆದ ಸಲಹೆ ಮಾರ್ಗದರ್ಶನ ನೀಡುತ್ತೇನೆ, ಈ ತನಕ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಹೆಬ್ರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ಹಿರಿಯ ಸದಸ್ಯ ಹೆಬ್ರಿ ಯೋಗೀಶ್ ಭಟ್ ಎಲ್ಲರ ಅಭಿಪ್ರಾಯವನ್ನು ಕ್ರೋಡಿಕರಿಸಿ ಮಾತನಾಡಿ, ಇದೇ ಬಂದ ಎಲ್ಲರ ಅಭಿಪ್ರಾಯಗಳ ಹಿಂದೇ ಹೆಬ್ರಿ ಸಾಹಿತ್ಯ ಪರಿಷತ್ತನ್ನು ಚೆನ್ನಾಗಿ ಕಟ್ಟುವ ಕನಸು ಇದೆ. ವೈಯಕ್ತಿಕವಾದ ಯಾವೂದೇ ಭಿನ್ನಾಭಿಪ್ರಾಯಗಳೂ ಇಲ್ಲ, ಸೇರಿದ ಎಲ್ಲರೂ ಅವರವರ ಮಿತಿಯಲ್ಲಿ ಕನ್ನಡದ ಸೇವೆ ಮಾಡುತ್ತಿದ್ದಾರೆ. ಎಲ್ಲರೂ ನಮ್ಮವರೆಂದು, ಎಲ್ಲರನ್ನೂ ಒಂದಾಗಿ ಒಟ್ಟುಗೂಡಿಸಿ ಕೆಲಸ ಮಾಡುವ ಮನಸ್ಸು ಇರುವ ಆಸಕ್ತರ ಆಯ್ಕೆಯನ್ನು ಜಿಲ್ಲಾ ಘಟಕ ಮಾಡಬೇಕಿದೆ, ಅಧ್ಯಕ್ಷರು ಯಾರೇ ಆದರೂ ಅವರು ನಮ್ಮವರೇ, ಅವರಿಗೆ ನಮ್ಮ ಸಂಪೂರ್ಣ ಸಹಕಾರ ಸಹಾಯ ಇದೇ, ನಮ್ಮಲ್ಲಿ ಯಾವೂದೇ ಗೊಂದಲಗಳು ಬೇಡ, ವೈಮನಸ್ಸುಗಳು ಬೇಡ, ಎಲ್ಲರೂ ಸೇರಿ ಕನ್ನಡ ಮತ್ತು ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿ ಮುನ್ನಡೆಸುವ ಎಂದು ಹೇಳಿ ಸೌಹಾರ್ದಯುವವಾಗಿ ಸರ್ವಸಮ್ಮತ ಅಧ್ಯಕ್ಷರ ಆಯ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಆಗಲಿ ಎಂದು ಮಾರ್ಗದರ್ಶನ ನೀಡಿದರು.
ಒಟ್ಟಾರೆಯಾಗಿ ಸಭೆಯಲ್ಲಿ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರನ್ನು ಸೇರಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ರಚನೆ ಆಗಲೇಬೇಕು ಎಂಬ ಒಕ್ಕೋರಲ ಒತ್ತಾಯ ಕೇಳಿಬಂತು.

ಸಭೆಯಲ್ಲಿ ಕನ್ನಡಾಭಿಮಾನಿಗಳಾದ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್, ಎಚ್. ಜನಾರ್ಧನ್, ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ, ನಿತೀಶ್ ಎಸ್ ಪಿ, ಶಿವಪುರ ಮಂಜುನಾಥ ಕುಲಾಲ್, ಸುರೇಶ್ ಭಂಡಾರಿ, ಬಲ್ಲಾಡಿ ಚಂದ್ರಶೇಖರ ಭಟ್, ಸುದೇಶ ಪ್ರಭು, ಶ್ರೀನಿವಾಸ ಭಂಡಾರಿ, ಪ್ರವೀಣ್ ಕುಮಾರ್, ಪತ್ರಕರ್ತರಾದ ಸುಕುಮಾರ್ ಮುನಿಯಾಲ್, ನರೇಂದ್ರ ಎಸ್ ಮರಸಣಿಗೆ, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ಮುರಳೀಧರ ಭಟ್ ಮುಂತಾದವರು ಹಾಜರಿದ್ದರು.

































