ರಾಯಚೂರು: ಮಂತ್ರಾಲಯದ ಗುರುರಾಘವೇಂದ್ರರ ದರ್ಶನಕ್ಕಾಗಿ ತೆರಳುತ್ತಿದ್ದ ವೇಳೆ ಆಟೋ ಪಲ್ಟಿಯಾಗಿ, ಅದರಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಮಾಧವರಂ ನಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ರಾಘವೇಂದ್ರ(೩೭), ಹುಬ್ಬಳ್ಳಿಯ ಅಭಿಷೇಕ್(೨೭) ಮೃತಪಟ್ಟವರು.
ರಾಘವೇಂದ್ರ, ಅಭಿಷೇಕ್ ಬೆಂಗಳೂರಿನಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದರು. ರೈಲ್ವೆ ನಿಲ್ದಾಣದಿಂದ ದೇವಸ್ಥಾನಕ್ಕೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.
ಪರಿಣಾಮ ರಾಘವೇಂದ್ರ ಹಾಗೂ ಅಭಿಷೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇದೇ ಆಟೋದಲ್ಲಿದ್ದಂತ ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕರ್ನೂಲ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ರಾಘವೇಂದ್ರ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದು, ಯಶವಂತಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಮಂತ್ರಾಲಯಕ್ಕೆ ಬಂದಿದ್ದರು ಎನ್ನಲಾಗಿದೆ.
ಮಾಧವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































