ವರದಿ : ದಿನೇಶ್ ರಾಯಪ್ಪನಮಠ
ಕೋಟ: ಸಂಸ್ಕೃತವನ್ನೇ ಸಂವಹನ ಭಾಷೆಯನ್ನಾಗಿಸಿಕೊಂಡಿದ್ದ ಪೂರ್ವಿಕರು ಮನೋಸ್ವಾಸ್ಥ್ಯಕ್ಕಾಗಿ ಅದೃಶ್ಯ ಶಕ್ತಿಯನ್ನು ತಮ್ಮದೇ ಭಾಷೆಯ ಮೂಲಕ ಪ್ರಾರ್ಥಿಸಿದರೇ ಹೊರತು ಈಗಿನ ಕೆಲವು ವಿಪರೀತ ಮತಿಗಳು ಆಕ್ಷೇಪಿಸುವಂತೆ ಕೆಳವರ್ಗದವರನ್ನು ಅಜ್ಞಾನದಲ್ಲಿರಿಸಲಲ್ಲ, ಕಾಲ ಬದಲಾಗುತ್ತಿದೆ, ವೇದಾಧ್ಯಯನ – ಸಂಸ್ಕೃತಾಭ್ಯಾಸರಹಿತ ಭವಿಷ್ಯತ್ತಿನ ಸಮಾಜದಲ್ಲಿ ಕನ್ನಡದಲ್ಲೇ ಆರಾಧನೆ ನಡೆದೀತು. ಮಂತ್ರದ ಭಾಷೆ ಯಾವುದಾದರೇನು? ಹೃದಯದ ಮೊರೆಯೇ ಭಕ್ತನನ್ನು ಕೊರೆಯುತ್ತದೆ ಎಂದು ವೇದಮೂರ್ತಿ ಪಂಡಿತ ಗುಂಡ್ಮಿ ಸತ್ಯನಾರಾಯಣ ಉಪಾಧ್ಯ ಹೇಳಿದರು.

ಇತ್ತೀಚಿಗೆ ಕೋಟದ ಕಸಾಪ ಕಛೇರಿಯಲ್ಲಿ ಪಾರಂಪಳ್ಳಿ ನರಸಿಂಹ ಐತಾಳರ ಕನ್ನಡ ‘ಸೌಭಾಗ್ಯ ಲಕ್ಷ್ಮೀ ವ್ರತ’ ಅನಾವರಣಗೊಳಿಸಿ ಮಾತನಾಡಿದರು. ಐತಾಳರ ಮತ್ತೊಂದು ಪುಸ್ತಕ ಸಮನ್ಯು ಚುಟುಕು ರತ್ನಾಕರವನ್ನು ಬಿಡುಗಡೆಗೊಳಿಸಿದ ಕೆ.ಸುಬ್ರಹ್ಮಣ್ಯ ಶೆಟ್ಟಿಯವರು ಕೃತಿಯಲ್ಲಿಯ ಸರಳ – ಸುಂದರ ಚೌಪದಿಗಳ ಮಹತ್ತನ್ನು ಎತ್ತಿ ತೋರಿದರು. ಪಿ.ಮಂಜುನಾಥ ಉಪಾಧ್ಯರು ಕೃತಿಗಳೆರಡರ ಪರಿಚಯ ಮಾಡಿದರು.
ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯಲ್ಲಿ ಡಾ. ಎಸ್.ಹಯವದನ ಉಪಾಧ್ಯರು ‘ಆನಂದಾನುಭೂತಿ’ಯ ಕುರಿತು ವಿಶೇಷ ಉಪನ್ಯಾಸ ಗೈದರು. ಕೋಟದ ಮಿತ್ರಮಂಡಳಿ ಮತ್ತು ಕ.ಸಾ.ಪ. ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಸುಮನ ಎಸ್. ಹೇರ್ಳೆ ನಿರ್ವಹಣೆಗೈದರು. ಶ್ರೀಜಿತ್ ಸೋಮಯಾಜಿ ಪ್ರಾರ್ಥನೆಗೈದರು. ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು, ಮನೋಹರ ಭಟ್ ವಂದಿಸಿದರು.


































