ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಉಪ ವಲಯ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ ಅವರು ಎಸಿಎಫ್ ಆಗಿ ಆಯ್ಕೆಯಾಗಿದ್ದಾರೆ.
ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದ್ದು ಫಾರೆಸ್ಟ್ರಿ ವಿಭಾಗದಲ್ಲಿ ಪುತ್ತೂರಿನ ಹಸ್ತಾ ಶೆಟ್ಟಿ ಅವರು ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
೨೦೧೭-೧೮ನೇ ಸಾಲಿನ ನೇಮಕಾತಿಗಾಗಿ ೨೦೧೮ರ ಸೆ.೫ ರಂದು ಗ್ರೂಪ್ ಎ ವೃಂದದ ೨೪ ಎಸಿಎಫ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

ಹಸ್ತಾ ಶೆಟ್ಟಿ ಪುತ್ತೂರಿನ ಕುಂಬ್ರದ ಪುರಂದರ ಶೆಟ್ಟಿ-ವಾರಿಜಾ ಶೆಟ್ಟಿ ದಂಪತಿಯ ಪುತ್ರಿ. ಪ್ರಾಥಮಿಕ ಪ್ರೌಢಶಿಕ್ಷಣ ಪುತ್ತೂರಿನಲ್ಲಿ ಪಡೆದ ಅವರು ಪಿಯು ವಿದ್ಯಾಭ್ಯಾಸವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಡೆದಿದ್ದಾರೆ.
ಮಡಿಕೇರಿಯ ಪೊನ್ನಂಪೇಟೆಯ ಕಾಲೇಜಿನಲ್ಲಿ ೪ ವರ್ಷಗಳ ಫಾರೆಸ್ಟ್ರಿ ಡಿಗ್ರಿ ಪಡೆದು, ೨೦೧೯ರಲ್ಲಿ ಕುಂದಾಪುರಕ್ಕೆ ಉಪ ವಲಯ ಅರಣ್ಯಾಧಿಕಾರಿಯಾಗಿ ನೇಮಕವಾಗಿದ್ದರು.
ಕರ್ತವ್ಯದಲ್ಲಿದ್ದುಕೊಂಡೇ ಹಸ್ತಾ ಎಸಿಎಫ್ ಪರೀಕ್ಷೆಗಾಗಿ ಹೆಚ್ಚಿನ ವ್ಯಾಸಂಗ ಮಾಡಿದ್ದಾರೆ. ರಾತ್ರಿ ನಿದ್ದೆಗೆಟ್ಟು ಓದಿ ಪರೀಕ್ಷೆ ಬರೆದು ಸಾಧಿಸಿದ್ದಾರೆ.
ಹಸ್ತಾ ತಂದೆ ಪುರಂದರ ಶೆಟ್ಟಿ ಅವರು ಮೇಸ್ತ್ರಿ ಕೆಲಸ ಮಾಡುತ್ತಿದ್ದು, ವಯೋಸಹಜ ಕಾರಣದಿಂದ ಈಗ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಇನ್ನು ಎರಡು ವರ್ಷಗಳ ತರಬೇತಿಯ ಬಳಿಕ ಹಸ್ತಾ ಅವರು ಎಸಿಎಫ್ ಆಗಿ ನಿಯೋಜನೆಗೊಳ್ಳಲಿದ್ದಾರೆ.

































