ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಬಿ. ವೈ ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ ಬೀಚ್ ಬಳಿ ಹೆದ್ದಾರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಪ್ರಮುಖ 5 ಜಂಕ್ಷನ್ ಬಳಿ (ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ ಜಂಕ್ಷನ್, ತಾಲ್ಲೂಕು ಕಛೇರಿ ಜಂಕ್ಷನ್) ಅಂಡರ್ ಪಾಸ್ ಅಥವಾ ಫ್ಲೈ ಓವರ್ ನಿರ್ಮಿಸಲು ನಿತಿನ್ ಗಡ್ಕರಿ ಅವರ ಮಂಗಳೂರು ಭೇಟಿ ಸಮಯದಲ್ಲಿ ಮನವಿ ಮಾಡಿದ್ದು, ಅದಕ್ಕೆ ಅವರು ವೇದಿಕೆಯಲ್ಲಿಯೇ ಸಮ್ಮತಿಸಿದ್ದರು.

ಇಂದು ಎನ್ ಹೆಚ್ ಎ ಐ ಮಂಗಳೂರು ಪಿ. ಡಿ ಅವರು ತಮ್ಮ ತಂಡದೊಂದಿಗೆ ಸ್ಥಳ ಪರಿಶೀಲನೆ ಮಾಡಿದರು. ಸ್ಥಳ ಪರಿಶೀಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಶೀಘ್ರವಾಗಿ ಅಂದಾಜು ಪಟ್ಟಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದರು.

ಸ್ಥಳ ಪರಿಶೀಲನೆ ಸಮಯದಲ್ಲಿ ಎನ್ ಹೆಚ್ ಎ ಐ ಮಂಗಳೂರು ಇದರ ಪಿ. ಡಿ ನಿಂಗೇಗೌಡ, ಅವರ ಕಚೇರಿಯ ಇಬ್ಬರು ಇಂಜಿನಿಯರ್, ಐ ಆರ್ ಬಿ ಸಂಸ್ಥೆಯ ಸಿಬ್ಬಂದಿ, ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಪೀರ್ ಪಾಷ, ರಾಷ್ಟ್ರೀಯ ಹೆದ್ದಾರಿ ಸಾಮಾಲೋಚಕರಾದ ತಿಮ್ಮರೆಡ್ಡಿ, ಪ್ರವೀಣ್ ಹಾಗೂ ಬೈಂದೂರಿನ ವೆಂಕಟೇಶ್ ಕಿಣಿ ಉಪಸ್ಥಿತರಿದ್ದರು.



































