ಮಂಗಳೂರು : 2020 ಜನವರಿ ತಿಂಗಳಿನಲ್ಲಿ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್ ದೋಷಿ ಎಂದಿರುವ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ರ ಸೆಕ್ಷನ್ 16 ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10000 ದಂಡ ವಿಫಲವಾದರೆ 6 ತಿಂಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4 ರ ಪ್ರಕಾರ 5 ವರ್ಷಗಳ ಕಠಿಣ ಸೆರೆವಾಸ ಮತ್ತು 10000 ರೂ. ದಂಡ, ವಿಫಲವಾದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಅನುಭವಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಏನಿದು ಪ್ರಕರಣ?

2020ರ ಜನವರಿ 20ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಬಾಂಬ್ ಇರಿಸಿದ್ದ. ಪತ್ತೆಯಾಗಿದ್ದ ಬಾಂಬ್ ಅನ್ನು ಅಂದೇ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಎಂಬಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.
ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದರು. ಆದರೆ, ಅಪರಾಧಿ ಆದಿತ್ಯ ರಾವ್ 2020ರ ಜ.22ರಂದು ತಾನೇ ಬಾಂಬ್ ಇರಿಸಿರುವುದಾಗಿ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗಿದ್ದ. ಅಂದಿನಿಂದ ಆದಿತ್ಯ ರಾವ್ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.
2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್ ಕರೆ, ಬೆಂಗಳೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಹಾಗೂ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಮೊಬೈಲ್ ಫೋನ್ನಿಂದಲೇ ಕರೆ ಮಾಡುತ್ತಿದ್ದ ಆತ ಬಳಿಕ ಸ್ವಿಚ್ ಆಫ್, ಸ್ವಿಚ್ ಆನ್ ಮಾಡಿಕೊಂಡು ಓಡಾಡುತ್ತಿದ್ದ. ಹಾಗಾಗಿ ಕರೆಗಳ ಲೊಕೇಶನ್ ಆಧರಿಸಿ ಬೆಂಗಳೂರಿನಲ್ಲಿ ಪೊಲೀಸರಿಂದ ಬಂಧಿತನಾಗಿ ಸುಮಾರು 8 ತಿಂಗಳು ಜೈಲಿನಲ್ಲಿದ್ದ.

ಮಣಿಪಾಲದ ಕೆಎಚ್ಬಿ ಕಾಲನಿಯಲ್ಲಿ ಕೆಲವು ವರ್ಷಗಳ ಕಾಲ ವಾಸವಿದ್ದ ಆತ ಎಂಬಿಎ ಮುಗಿಸಿ ಬೆಂಗಳೂರಿಗೆ ತೆರಳಿ ಎಂ.ಜಿ. ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್ನಲ್ಲಿ ಮಾರುಕಟ್ಟೆ ವಿಭಾಗದಲ್ಲಿ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ.
ಒಂದು ವರ್ಷದ ಬಳಿಕ ಅಲ್ಲಿ ಕೆಲಸ ಬಿಟ್ಟು ಮತ್ತೂಂದು ಬ್ಯಾಂಕಿ ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಕೇವಲ 6 ತಿಂಗಳು ಕೆಲಸ ಮಾಡಿ ಮತ್ತೆ ಈ ಹಿಂದೆ ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಸೇರಿದ್ದ. ಉತ್ತಮ ವೇತನ ಲಭಿಸುತ್ತಿದ್ದರೂ ಅದನ್ನು ಬಿಟ್ಟು ಮೂಡುಬಿದಿರೆಯ ಕಾಲೇಜೊಂದರಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ.
ಅಲ್ಲಿ ಕೂಡ ಕೆಲವು ದಿನ ಕೆಲಸ ಮಾಡಿ ಬಳಿಕ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ.



































