ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಎಂ ವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇವರ ವತಿಯಿಂದ ಕ್ರೀಡಾ ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ ಅಂತರ್ ಕಾಲೇಜು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಭಾನುವಾರ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.

ನಾನಾ ಭಾಗದ 21 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಅಂತಿಮ ಹಣಾ ಹಣಿಯಲ್ಲಿ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜು ಮತ್ತು ಭುವನೇಂದ್ರ ಕಾಲೇಜು ಕಾರ್ಕಳ ಫೈನಲ್ ಹಂತ ತಲುಪಿದವು. ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜು ತಂಡ ಪ್ರಥಮ ಬಹುಮಾನ ಮತ್ತು ಎಂ ವಿ ಟ್ರೋಫಿ 2022 ಪ್ರಥಮ ಬಹುಮಾನ ಶಾಶ್ವತ ಫಲಕ ಪಡೆದು ಭುವನೇಂದ್ರ ಕಾಲೇಜು ದ್ವೀತೀಯ ಬಹುಮಾನ ಪಡೆದುಕೊಂಡಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ದಕ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಪ್ರಪಂಚದಲ್ಲಿ ಅತೀ ಹೆಚ್ಚು ಯುವ ಶಕ್ತಿ ಹೊಂದಿದ ಭಾರತ ದೇಶದಲ್ಲಿ ಯುವಕರು ಕ್ರೀಡೆಯ ಜೊತೆ ರಾಷ್ಟ್ರ ಪ್ರೇಮ ಬೆಳೆಸಿಕೊಂಡು ಅಭದ್ರತೆಯಲ್ಲಿರುವ ಕಾಲ ಘಟ್ಟದಲ್ಲಿ ದೇಶವನ್ನು ಮುನ್ನಡೆಸುವ ಮಹಾನ್ ವ್ಯಕ್ತಿಗಳಾಗ ಬೇಕು ಎಂದರು.

ವಾರಂಬಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಪಿ.ಪಿ.ಸಿ ಕಾಲೇಜಿನ ಉಪನ್ಯಾಸಕ ವಿಶಾಖ್ ಶೆಟ್ಟಿ, ಮೆಸ್ಕಾಂನ ಗಣೇಶ್ ದೇವಾಡಿಗ, ಎಂ ವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಮಂಜುನಾಥ್ ಜೋಗಿ, ಕಾರ್ಯದರ್ಶಿ ವಿನಯ ಮೊಯಿಲಿ ಉಪಸ್ಥಿತರಿದ್ದರು.



































