ವರದಿ : ಶ್ರೀದತ್ತ ಹೆಬ್ರಿ
ಮುನಿಯಾಲು : ನಿರಂತರವಾಗಿ ಸದ್ದಿಲ್ಲದೆ ಒಂದಿಲ್ಲೊಂದು ಸೇವೆಯಲ್ಲಿ ಸದಾ ಮಗ್ನರಾಗುವ ಉಡುಪಿ ಜಿಲ್ಲೆಯ ಎಳ್ಳಾರೆ ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು ಅವರಿಗೆ ಅಖಿಲ ಗೋವಾ ಕನ್ನಡಿಗರ ಮಹಾ ಸಂಘ ನೀಡುವ ಸಮಾಜಸೇವ ರತ್ನ ಪ್ರಶಸ್ತಿ ದೊರೆತಿದೆ. ಗೋವಾದ ಪಣಜಿಯಲ್ಲಿ ಇದೇ ೨೬ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಗೋವಾ ವಾಸ್ಕೋ ಡಿ ಗಾಮ ಕ್ಷೇತ್ರದ ಶಾಸಕ ಕೃಷ್ಣಾ (ದಾಜಿ) ವಿ.ಸಾಲ್ಕರ್ ಪ್ರಶಸ್ತಿ ಪ್ರದಾನ ಮಾಡುವರು. ಕೊರ್ತಾಲಿಂ ಕ್ಷೇತ್ರದ ಶಾಸಕ ಅಂತೋನಿಯಾ ವಾಜ್ ಸಹಿತ ವಿವಿಧ ಗಣ್ಯರು ಭಾಗವಹಿಸುವರು.
ರಾಮಣ್ಣ ಶೆಟ್ಟಿ ಮತ್ತು ಜಲಜ ಶೆಟ್ಟಿ ಅವರ ಪುತ್ರರಾಗಿರುವ ಶಂಕರ ಶೆಟ್ಟಿ ಒರ್ವ ದಿನಸಿ ಅಂಗಡಿಯಲ್ಲಿ ನೌಕರನಾಗಿದ್ದರೂ ಬಡವರ ಬಗೆಗಿನ ಕಾಳಜಿಯಲ್ಲಿ ಜನಮನಗೆದ್ದಿದ್ದಾರೆ. ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯನಾಗಿ ಪರಿಸರದ ವಿವಿಧ ಸಂಘಸಂಸ್ಥೆಯಲ್ಲಿ ಸದಸ್ಯನಾಗಿ ಜಾತಿ ಮತ ಭೇದ ವಿಲ್ಲದೆ ಸಕ್ರೀಯವಾಗಿ ಜನರ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಾಮಾಣಿಕ ಜನಸೇವೆ : ಪ್ರಾಣ ರಕ್ಷಣೆ – ನಕ್ಸಲ್‌ಪೀಡಿತ ಪ್ರದೇಶದಲ್ಲಿ ವಾಹನವೂ ಹೋಗದ ಮುಟ್ಲುಪಾಡಿಯಲ್ಲಿ ಗರ್ಭಿಣಿ ಮಹಿಳೆ ಹೆರಿಗೆ ನೋವಿನಲ್ಲಿ ಯಾವೂದೇ ವ್ಯವಸ್ಥೆ ಇಲ್ಲದೆ ನೋವು ತಾಳಲಾರದೆ ಮುಟ್ಲುಪಾಡಿಯ ದೇವಸ್ಥಾನದ ಜಗುಲಿಯಲ್ಲಿ ಮಲಗಿದ್ದರು. ಸುದ್ದಿ ತಿಳಿದು ಕಾರಿನಲ್ಲಿ ಹಾಕಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಗರ್ಭಿಣಿಯೊಬ್ಬರು ತನ್ನ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿ ಆ ಕುಟುಂಬದ ಜೊತೆಗೆ ರಾತ್ರಿಯಿಡಿ ಆಸ್ಪತ್ರೆಯಲ್ಲೇ ನಿಂತು ನೆರವು ನೀಡಿ ಆರೈಕೆ ನೀಡಿದ್ದಾರೆ.
ಮುನಿಯಾಲು, ಎಳ್ಳಾರೆ ಸಹಿತ ಗ್ರಾಮದಲ್ಲಿ ನೆರವು ಸಕಾಲಿಕ ಸಹಾಯ ಕೇಳಿ ಬಂದ ಎಲ್ಲರಿಗೂ ಆರೋಗ್ಯ, ಆಸ್ಪತ್ರೆಗೆ ದಾಖಲಿಸುವುದು, ಶಿಕ್ಷಣಕ್ಕೆ ನೆರವು, ತುರ್ತು ಸಂದರ್ಭದ ಚಿಕಿತ್ಸೆ, ಅಪಘಾತದ ಸಂದರ್ಭದಲ್ಲಿ ನೆರವು, ಚಿಕಿತ್ಸೆಗೆ ವ್ಯವಸ್ಥೆ ಹೀಗೆ ನೂರಾರು ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಾಯವಾಗಿ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕಷ್ಟಕ್ಕಾಗಿ ರಾತ್ರಿ ಹಗಲೆನ್ನದೆ ಕರೆ ಮಾಡಿದ ಪರಿಸರದ ನೂರಾರು ಕುಟುಂಬಗಳಿಗೆ ಸಕಾಲಕ್ಕೆ ಸ್ಪಂದೆನೆ ನೀಡುತ್ತಿರುವ ಶಂಕರ ಶೆಟ್ಟಿ ೧೦ ಶವಸಂಸ್ಕಾರವನ್ನು ಸ್ವಂತ ಖರ್ಚಿನಲ್ಲಿ ಮಾಡಿ ಕುಟುಂಬದ ಕಷ್ಟಕ್ಕೆ ಸ್ಪಂದನೆ ನೀಡುವ ಜೊತೆಗೆ ೧೨೫ ಕ್ಕೂ ಶವಸಂಸ್ಕಾರದ ಪುಣ್ಯದ ಕೆಲಸದಲ್ಲಿ ಭಾಗಿಯಾಗಿ ಬಡ ಕುಟುಂಬಗಳಿಗೆ ನೆರವು ನೀಡಿದ್ದಾರೆ.
ಕೊರೋನ ಲಾಕ್‌ಡೌನ್‌ಸಂಕಷ್ಟದ ಕಾಲದಲ್ಲಿ ಊರಿನ ಬಹುತೇಕ ಮನೆಗಳಿಗೆ ಆಹಾರ ಸಾಮಾಗ್ರಿಗಳ ಸರಬರಾಜು, ನೂರಾರು ಮನೆಗಳಿಗೆ ಔಷಧಿಯ ವಿತರಣೆ, ಸಮಾಜದಲ್ಲಿ ನಡೆಯುವ ಒಳ್ಳೇಯ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸೇವೆಯ ಜೊತೆಗೆ ಬಹುಮುಖ ಸಮಾಜ ಸೇವೆಯಲ್ಲಿ ತಲ್ಲೀನರಾಗಿದ್ದಾರೆ.
ಸನ್ಮಾನ , ಗೌರವಗಳು : ಜನಸೇವೆಯನ್ನು ಗುರುತಿಸಿ ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ವತಿಯಿಂದ ಗೌರವ ಸನ್ಮಾನ, ಮುನಿಯಾಲು ಬಂಟರ ಸಂಘದ ವತಿಯಿಂದ ಗೌರವ, ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಅವರಿಂದ ಸನ್ಮಾನ ಸಹಿತ ವಿವಿಧ ಹಲವಾರು ಸಂಘಸಂಸ್ಥೆಗಳು ಸನ್ಮಾನ ಗೌರವ ನೀಡಿವೆ.


































