ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕಾರ್ಮಿಕ ಸಂಹಿತೆ ಮೂಲಕ ಕಟ್ಟಡ ಕಾರ್ಮಿಕರ ಸೆಸ್, ಕಟ್ಟಡ ಕಾರ್ಮಿಕರ 1996 ಕಾನೂನು ರದ್ದುಗೊಳಿಸಿ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ, ಕಾರ್ಮಿಕರ, ಜನಸಾಮಾನ್ಯರ ಬೇಡಿಕೆಗಳಿಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮಾರ್ಚ್ 28 ಮತ್ತು 29 ರಂದು ದೇಶವ್ಯಾಪಿ ಮುಷ್ಕರಕ್ಕೆ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಬೆಂಬಲಿಸಿ ಭಾಗವಹಿಸಲಿದೆ.
28 ರಂದು ಗ್ರಾಮ ಪಂಚಾಯಿತಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಿದ್ದು, ಮಾರ್ಚ್ 29 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ.

ಮನೆಕಟ್ಟುವ ಸಹಾಯಧನ 5 ಲಕ್ಷಕ್ಕಾಗಿ, ಅಪಘಾತ ಪರಿಹಾರ 5 ಲಕ್ಷಕ್ಕಾಗಿ, ಕಟ್ಟಡ ಕಾರ್ಮಿಕರ ಪತ್ನಿಗೂ ಹೆರಿಗೆ ಭತ್ಯೆ ನೀಡಲು, ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗಾಗಿ, ಪಿಂಚಣಿ ದಾರರಿಗೆ ಸಮರ್ಪಕವಾಗಿ ಪಿಂಚಣಿ, ಕಟ್ಟಡ ಸಾಮಗ್ರಿಗಳ ಬೆಲೆ ನಿಯಂತ್ರಣಕ್ಕಾಗಿ ಹೋರಾಟ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.


































