ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಲ್ಲಿ ಇರುವ ಅಲ್ಪ ಸ್ವಲ್ಪ ಕಾಮಗಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದಾಡುವ ಜಾಗದಲ್ಲಿ ಚರಂಡಿಗೆ ಮುಚ್ಚಲು ಮಾಡಲಾದ ಚಪ್ಪಡಿಗಳು ಎಲ್ಲೆಂದರಲ್ಲಿ ಬಾಯಿ ತೆರೆದುಕೊಂಡಿದ್ದು ಸಾರ್ವಜನಿಕರಿಗೆ ತೀರಾ ತೊಂದರೆ ಉಂಟು ಮಾಡುತ್ತಿದೆ.

ಇಲ್ಲಿನ ಸಿಟಿ ಸೆಂಟರ್ ಬಳಿಯಿಂದ ಧರ್ಮಾವರಂ ತನಕದ ಎರಡು ಭಾಗದಲ್ಲಿ ಸರ್ವೀಸ್ ರಸ್ತೆಯ ಬದಿಯಲ್ಲಿ ನೀರು ಹೋಗಲು ಚರಂಡಿ ಮಾಡಲಾಗಿತ್ತು. ಅದರೆ ಚರಂಡಿಯಲ್ಲಿ ನೀರಿನ ಜೊತೆ ಕಸ ಕಡ್ಡಿಗಳು ಸಿಲುಕಿದಾಗ ತೆಗೆಯಲು ಮಾಡಲಾದ ಮುಚ್ಚಳ ಬಹುತೇಕ ಕಡೆಯಲ್ಲಿ ತೆರೆದುಕೊಂಡಿದ್ದು ಅಪಾಯಕ್ಕೆ ಅಹ್ವಾನ ನೀಡುವಂತಿದೆ.

3 ಪ್ರಾಥಮಿಕ, 3 ಪ್ರೌಢ, 3 ಪದವಿಪೂರ್ವ ಮತ್ತು 1 ಪದವಿ ಕಾಲೇಜು ಇದೇ ವ್ಯಾಪ್ತಿಯಲ್ಲಿದ್ದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಛೇರಿಗಳಿಗೆ ನಡೆದುಕೊಂಡು ಹೋಗುವ ಸಾರ್ವಜನಿಕರು ಬಿದ್ದು ಮೂಳೆ ಮುರಿತಕ್ಕೆ ಒಳಗಾದವರು ಹಲವರಿದ್ದಾರೆ.

ರಾತ್ರಿ ಹೊತ್ತು ಕೆಲವೆಡೆಯಲ್ಲಿ ಬೆಳಕು ಕೂಡಾ ಇಲ್ಲವಾಗಿದ್ದು, ಬಿದ್ದವರು ಎದ್ದವರ ಲೆಕ್ಕವೇ ಇಲ್ಲವಾಗಿದೆ.
ನಿರ್ಮಲ ಹೈಸ್ಕೂಲ್, ಕ್ಷೇಮಧಾಮ ಆಸ್ಪತ್ರೆ, ನಗರ ಮಧ್ಯ ಭಾಗವೆನಿಸಿದ ರೋಟರಿ ಸಮಾಜ ಭವನ, ಸಮುದಾಯ ಆರೋಗ್ಯ ಕೇಂದ್ರ ಇನ್ನೊಂದು ಭಾಗವಾದ ಅರಣ್ಯ ಇಲಾಕೆಯ ಕ್ಷಾಟ್ರಸ್ ಬಳಿ, ಸರಕಾರಿ ಪದವಿ ಪೂರ್ವ ಕಾಲೇಜು, ಅಂಚೆ ಕಛೇರಿ ಮತ್ತು ಹೋಲಿ ಫ್ಯಾಮಿಲಿ ಚರ್ಚ್ ಬಳಿ ಬಹುತೇಕ ಭಾಗದ ನೀರು ಹರಿದು ಹೋಗುವ ಚರಂಡಿಯೊಂದು ತೆರೆದ ಬಾವಿಯಂತಿಂದೆ.

ಬಾಯಿ ತೆರೆದುಕೊಂಡಿರುವಲ್ಲಿ ಕೆಲವೊಂದು ಭಾಗದಲ್ಲಿ ಜನರು ಪ್ಲಾಸ್ಟಿಕ್ ಕವರಿನಲ್ಲಿ ಬೇಡದ ವಸ್ತುಗಳನ್ನು, ತ್ಯಾಜ್ಯಗಳನ್ನು ಕೂಡಾ ಎಸೆದಿರುವುದು ಕಂಡು ಬರುತ್ತಿದೆ.

ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದುಕೊಂಡ ಸಂಸ್ಥೆ ಕೇವಲ ಟೋಲ್ ಸಂಗ್ರಹದ ವಸೂಲಿ ಮಾತ್ರ ಮಾಡುವುದಲ್ಲ. ರಸ್ತೆ ನಡುವೆ ಬೆಳೆಸಿದ ಹೂ ಗಿಡಗಳ ನಿರ್ವಹಣೆ, ಮರಳಿನ ತೆರವು ಮಾಡಿದಂತೆ ಸಾರ್ವಜನಿಕರ ಜೀವಕ್ಕೆ ಅಪಾಯ ತರುವ ಇದಕ್ಕೆ ಕೂಡಾ ಸೂಕ್ತ ಕಾಯಕಲ್ಪ ಮಾಡಬೇಕಾಗಿದೆ.

ನನ್ನ ಮನೆಯ ಎದರು ಭಾಗದಲ್ಲಿ 4 ಭಾಗದಲ್ಲಿ ಅಲ್ಲಲ್ಲಿ ಚರಂಡಿಯು ಬಾಯಿತೆರೆದುಕೊಂಡಿದೆ. ಮುಚ್ಚಲಾದ ಚಪ್ಪಡಿ ಕೂಡಾ ಕೆಳಗಡೆ ಬಿದ್ದಿದೆ. ಅನೇಕರು ಬಿದ್ದು ಮೂಳೆ ಮುರಿತಕ್ಕೆ ಒಳಪಟ್ಟಿದ್ದಾರೆ. ಸಂಬಂಧ ಪಟ್ಟವರು ಕೂಡಲೇ ಸರಿಪಡಿಸಬೇಕಾಗಿದೆ.ರತ್ನಾಕರ ನಾಯಕ್, ನಿವೃತ್ತ ರೈಲ್ವೆ ಅಧಿಕಾರಿ, ಇಂದಿರಾ ನಗರ, ಬ್ರಹ್ಮಾವರ


































