ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : 7 ವರ್ಷದಿಂದ ಕರಾವಳಿ ಜಿಲ್ಲೆಯಲ್ಲಿ ಮಲೆನಾಡು ಭಾಗದ ಅಂಧರ ಸಂಗೀತ ತಂಡವೊಂದು ಬೀದಿ ಬದಿಯಲ್ಲಿ ಸಂಜೆ ಹೊತ್ತು ಸಂಗೀತ ಸುಧೆಯನ್ನು ಹರಿಸುತ್ತಿದ್ದಾರೆ.
ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ ಶೃಂಗೇರಿ ಇದರ 10 ಸದಸ್ಯ ತಂಡ ಪ್ರತೀ ದಿನ ಯಾವುದಾದರೊಂದು ಊರಿನ ಹೃದಯ ಭಾಗದಲ್ಲಿ ಕುಳಿತುಕೊಂಡು ಕನ್ನಡ ದಾಸರ ಪದಗಳು, ಚಿತ್ರ ಗೀತೆಗಳು, ಭಾವ ಗೀತೆಗಳ ಜೊತೆ ತುಳು ಗೀತೆಯನ್ನು ಹಾಡಿ ಜನರಿಗೆ ಸಾಹಿತ್ಯ ಮತ್ತು ಸಂಗೀತದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಹುಟ್ಟು ಅಂಧರಾದ ಇವರು ಶಾಲಾ ಶಿಕ್ಷಣದ ಜೊತೆ ಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿತವರು.
ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಇವರ ತಂಡದಲ್ಲಿ ಎಲೆಕ್ಟ್ರಾನಿಕ್ ಆರ್ಗನ್, ತಬಲಾ, ಪ್ಯಾಡ್ ಸೇರಿದಂತೆ ಹಲವಾರು ಸಂಗೀತ ಉಪಕರಣದೊಂದಿಗೆ ಬಾಡಿಗೆಯಲ್ಲಿ ಧ್ವನಿ ವರ್ಧಕ ವ್ಯವಸ್ಥೆ ಇವರೇ ಮಾಡಿಕೊಂಡು ಶೋತೃಗಳನ್ನು ಸೆಳೆಯುತ್ತಾರೆ.


ಇವರದೇ ತಯಾರಿಯಲ್ಲಿ ಫಿನೈಲ್ ಕೂಡಾ ಮಾಡಿ ಅದನ್ನು ಕಾರ್ಯಕ್ರಮದಲ್ಲಿ ತಂದಿರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ.
ರಾಜ್ಯದಲ್ಲಿ 2 ಲಕ್ಷ ಮಂದಿ ಅಂಧರು ಇದ್ದು ಸರಕಾರದಿಂದ ಇವರಿಗೆ ಪ್ರತಿ ತಿಂಗಳ 1400 ಮಾಶಾಸನ ಹೊರತಾಗಿ ಇಂತಹ ಸಂಗೀತ ಕಲಾವಿದರೆ 2000 ಮಂದಿ ಇದ್ದು ಕಲಾ ಪೋಷಕರೆ ಇವರಿಗೆ ಅನ್ನದಾತರು.

ಕಲಾ ತಂಡದವರು ಕಾರ್ಯಕ್ರಮದ ಎದುರು ಭಾಗದಲ್ಲಿ ಒಂದು ಹುಂಡಿಯೊಂದನ್ನು ಇರಿಸಿದ್ದು, ಕಲಾಸಕ್ತರು ನೀಡಿದ ಹಣದಲ್ಲೇ ಇವರ ಬದುಕಿನ ಬಂಡಿ ಸಾಗಬೇಕು.
ಯಾವೂದೇ ಸಮಾರಂಭಕ್ಕೆ ಇವರು ಶಾಸ್ತ್ರೀಯ , ಸುಗಮ ಸಂಗೀತ ಸೇರಿದಂತೆ ಜನರು ಬಯಸಿದ ಕಾರ್ಯಕ್ರಮ ನೀಡಬಲ್ಲರು.
ಒಂದು ದಿನ ಕಾರ್ಯಕ್ರಮ ಮಾಡಿದಾಗ ಕನಿಷ್ಟ 20,000 ರೂ. ಸಂಗ್ರಹವಾದರೆ ಅವರು ಊಟ ಮಾಡಬಹುದು, ಇಲ್ಲವಾದರೆ ಉಪವಾಸ ಮಾಡಬೇಕಾಗುತ್ತದೆ .

ಸಂಸಾರಿ ಬದುಕಿನ ಓರ್ವ ಮಹಿಳೆ ಸೇರಿದಂತೆ ಬಹುತೇಕ ಅಂಧರೇ ಇರುವ ಕಲಾತಂಡದವರು ಸ್ವಾಭಿಮಾನಿ ಬದುಕಿಗೆ ಸಂಗೀತವನ್ನು ಆಯ್ಕೆ ಮಾಡಿಕೊಂಡವರು. ಈ ಸರಸ್ವತೀ ಪುತ್ರರಿಗೆ ಸರಕಾರ ಇವರ ಬದುಕಿಗೆ ನೆರವಾಗಬೇಕು ಮತ್ತು ಸಾರ್ವಜನಿಕರು ಅವರು ಬರುವ ಊರಿನಲ್ಲಿ ಅವರಿಗೆ ಎಲ್ಲರೂ ಸಹಕಾರ ನೀಡಿ ಸಂಗೀತ ಪರಂಪರೆಯನ್ನು ಉಳಿಸ ಬೇಕಾಗಿದೆ.
ತಂಡದ ಅಧ್ಯಕ್ಷ ಯೋಗೀಶ್ 9480591770 ಸಂಪರ್ಕ ಮಾಡಬಹುದು.

































