ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಭೂಮಿಕಾ ಹಾರಾಡಿ ಕಲಾ ತಂಡದಿಂದ ಪ್ರತೀ ವರ್ಷದಂತೆ ಬುಧವಾರದಿಂದ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನಲ್ಲಿ 5 ದಿನಗಳ ಬಣ್ಣ ನಾಟಕೋತ್ಸವ ನಡೆಯುತ್ತಿದೆ.
ನಾಟಕದ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್ ಪಿ ಮಾತನಾಡಿ, ಎಲ್ಲಾ ಕಲೆಗಳಿಗೆ ಮೂಲ ರಂಗ ಕಲೆ ನಾಟಕವಾಗಿದೆ. ಕೆಲವೆ ಕೆಲವು ಊರಿನಲ್ಲಿ ನಡೆಯುವ ರಂಗ ಚಟುವಟಿಕೆ ಉಳಿದಂತೆ ಬ್ರಹ್ಮಾವರದಲ್ಲಿ ನಡೆಯುವ ಪಂಚದಿನದ ನಾಟಕೋತ್ಸವದ ಉಳಿವಿಗೆ ಜನರ ಪ್ರೋತ್ಸಾಹ ಬೇಕಾಗಿದೆ ಎಂದರು.

ಸಂಸ್ಕೃತಿ ಪ್ರತಿಷ್ಠಾನ ಉಡುಪಿಯ ಸ್ಥಾಪಕ ವಿಶ್ವನಾಥ್ ಶಣೈ , ಬ್ರಹ್ಮಾವರದ ಸಿ .ಏ ಪದ್ಮನಾಭ ಕಾಂಚನ್ , ಉದ್ಯಮಿ ಚೇತನ್ ಶೆಟ್ಟಿ , ಭೂಮಿಕಾ ತಂಡದ ಸಂಚಾಲಕ ರಾಮ್ ಶೆಟ್ಟಿ ,ಅಧ್ಯಕ್ಷ ಹರೀಶ್ ಕಿರಣ್ ತುಂಗ , ಸುನಿಲ್ ಪಾಂಡೇಶ್ವರ ರವಿ ಎಸ್ ಪೂಜಾರಿ ಉಪಸ್ಥಿತರಿದ್ದರು.

ಶುಕ್ರವಾರ ಸುಮನಸ ಕೊಡವೂರು ತಂಡದಿಂದ ಬಾಲಕೃಷ್ಣ ಶಿಬಾರ್ಲ ರಚನೆಯ ದಿವಾಕರ ಕಟೀಲ್ ಇವರ ಸಂಗೀತ ಮತ್ತು ನಿರ್ದೇಶನದಲ್ಲಿ ಕಾಪ ತುಳು ನಾಟಕ ಜರುಗಿತು.

ನಾಟಕೋತ್ಸವದಲ್ಲಿ ಪ್ರಥಮ ಪ್ರಶಸ್ತೀ ಪಡೆದ 1-35 ನಿಮಿಷದ 12 ಪಾತ್ರದಾರಿಗಳ ಕಾಪ ನಾಟಕ ಬಲಿಷ್ಠರು ಕೆಳ ವರ್ಗದವರನ್ನು ಶೊಷಿಸುವ ಮತ್ತು ಹಲವಾರು ನಂಬಿಕೆ ಆಚರಣೆಗಳನ್ನು ಕೆಳ ವರ್ಗದವರಿಗೆ ಕಟ್ಟಿಡುವ ಕಥಾ ಹಂದರದಲ್ಲಿ ವಿದ್ಯಾವಂತ ಯುವಕನನ್ನು ಕೂಡಾ ಹಳೆ ಕಾಲದಂತೆ ಊರಿನ ಮಾರಿ ಕೋಲ ಉತ್ಸವಕ್ಕೆ ಕಾಯುವ ಕೆಲಸಕ್ಕೆ ನೇಮಿಸುವಲ್ಲಿ ಸಫಲವಾಗುವ ಬಲಿಷ್ಠರ ಹಿಡಿತಕ್ಕೆ ಊರ ಜನರನ್ನು ಬಳಸಿಕೊಳ್ಳುವ ಕಥೆಯನ್ನು ನಾಟಕದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಮತ್ತು ಕಲಾವಿದರನ್ನು ತರಬೇತಿಗೊಳಿಸಿ ಅಭಿನಯ ಹೊರಹೊಮ್ಮಿಸುವಲ್ಲಿ ಗ್ರಾಮೀಣ ಸಂಗೀತ ಪರಿಕರದಿಂದಲೆ ಸಂಗೀತ ನೀಡಿದ ನಿರ್ದೇಶಕರು ಯಶಸ್ವಿಯಾಗಿದ್ದಾರೆ.


ಆರಂಭದಲ್ಲಿ ಮಾರಿ, ದೈವ, ಕರಿಯನ ಮನೆ, ಗುತ್ತಿನ ಮನೆ, ದೈವದ ನುಡಿ ಪ್ರತೀ ಕಲಾವಿದರು ರಂಗ ತಂತ್ರಕ್ಕೆ ಬದ್ದರಾಗಿ ನೆರಳು ಬೆಳಕಿನ ಸಂಯೋಜನೆ ನಿಜ ಅರ್ಥದಲ್ಲಿ ಬಣ್ಣ ನಾಟಕೋತ್ಸವಕ್ಕೆ ಮೆರಗು ನೀಡಿದೆ.



































