ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸರಕಾರದ ಒಪ್ಪಿಗೆ ಮೇರೆಗೆ ಪ್ರತಿ ಯುನಿಟ್ ಗೆ ಸರಾಸರಿ 35 ಪೈಸೆ ಹೆಚ್ಚಿಸಿರುವುದು ಮಾತ್ರವಲ್ಲದೆ ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಳ ಮಾಡಿರುವುದು ಖಂಡನೀಯವೆಂದು ಡಿವೈಎಫ್ಐ ಮುಖಂಡ ರವಿ.ವಿ.ಎಂ ಹೇಳಿದರು.
ಡಿವೈಎಫ್ಐ ರಾಜ್ಯ ವ್ಯಾಪಿ ನಡೆದ ಹೋರಾಟದ ಭಾಗವಾಗಿ ಇಂದು ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣದ ಪ್ರಕ್ರೀಯೆಗಳ ಭಾಗವಾಗಿ ದರ ಏರಿಕೆ ಮಾಡಲಾಗುತ್ತಿದೆ. ತೈಲ ಬೆಲೆ,ಅಡುಗೆ ಅನಿಲ.ಔಷಧಿಗಳ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿರುವಾಗ ನೆರವಿಗೆ ಬರಬೇಕಾದ ಸರ್ಕಾರದ ಇಂಧನ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಡಿವೈಎಫ್ಐ ವಿರೋಧಿಸುತ್ತದೆ ಎಂದು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ ಕಲ್ಲಾಗರ ತಿಳಿಸಿದರು.

ಬಿಜೆಪಿ ನೇತ್ರತ್ವದ ಸರ್ಕಾರವು ಬೆಲೆ ಏರಿಕೆ ತಡೆಗಟ್ಟಲು ಯಾವುದೇ ಪರ್ಯಾಯ ಕ್ರಮವಹಿಸದಿರುವುದು ಬಿಜೆಪಿಯ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸರಕಾರ ಕೂಡಲೇ ಬೆಲೆ ಏರಿಕೆ ತಡೆಗಟ್ಟಲು ಕ್ರಮವಹಿಸಿ ಜನತೆಯನ್ನು ರಕ್ಷಿಸಲು ಮುಂದಾಗಬೇಕೆಂದು ಡಿವೈಎಫ್ಐ ಮಾಜಿ ಅಧ್ಯಕ್ಷರಾದ ಎಚ್ ನರಸಿಂಹ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಜ ಬಿಟಿಆರ್, ಪ್ರಕಾಶ್ ಕೋಣಿ, ಹೆಮ್ಮಾಡಿ ಸಂತೋಷ, ಸುರೇಂದ್ರ,ಚಂದ್ರಶೇಖರ ವಿ,ಆದಿವಾಸಿ ಸಂಘಟನೆಯ ಮುಖಂಡರಾದ ಶ್ರೀಧರ ಭಾಗವಹಿಸಿದ್ದರು.
ಮುಖಂಡರಾದ ಉದಯ ಟೈಲರ್ ಸ್ವಾಗತಿಸಿದರು.



































