ವರದಿ : ದಿನೇಶ್ ರಾಯಪ್ಪನಮಠ
ಕೋಟ : ಕೆದೂರು ಗ್ರಾಮ ಪಂಚಾಯಿತಿಯ ಉಳ್ತೂರು ಗ್ರಾಮದ ಸರ್ವೆ ನಂ. 207 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನವರು 2 ಎಕ್ರೆ ಜಾಗವನ್ನು 2012ರಲ್ಲಿ ಖರೀದಿ ಮಾಡಿದ್ದು, ಇದರ ಕಾಂಪೌಂಡ್ ವಾಲ್ ಕಟ್ಟಲು 4 ಬಾರಿ ಟೆಂಡರ್ ಆಗಿದ್ದು, ಇದಕ್ಕೆ ಸ್ಥಳೀಯರ ವಿರೋಧ ಇತ್ತು. ಕಾರಣ ಸ್ಥಳೀಯವಾಗಿ 300 ಮೀಟರ್ ದೂರದಲ್ಲಿ ನವ ಗ್ರಾಮದ 100 ಮನೆಗಳು ಹಾಗೂ ಇದರ ಸುತ್ತಮುತ್ತಲು 500 ರಿಂದ 600 ಮನೆಗಳಿವೆ. ಅದಕ್ಕಾಗಿ ಸ್ಥಳೀಯರು ಜಿಲ್ಲಾಧಿಕಾರಿಯವರಿಗೆ ಹಲವು ಬಾರಿ ಮನವಿ ಮಾಡಿದ್ದರು.
ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಯವರು ಭೇಟಿ ಮಾಡಿದ್ದರು.
ಈ ನಡುವೆ ಮಂಗಳವಾರ ಬೆಳಿಗ್ಗೆ ಉಡುಪಿ ಮಾನ್ಯ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಸ್ಥಳ ವೀಕ್ಷಣೆಗೆ ದಿಡೀರ್ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಸ್ಥಳ ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ನಗರ ಇರಬಹುದು, ಪಟ್ಟಣ ಇರಬಹುದು, ಅಥವಾ ಗ್ರಾಮ ಪ್ರದೇಶ ಇರಬಹುದು, ಅಲ್ಲಿ ಸ್ವಚ್ಛತೆ ಇರಬೇಕೆಂದರೆ ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಅತ್ಯಗತ್ಯ.
ನಮ್ಮ ಪಟ್ಟಣ ಪಂಚಾಯತ್ ನವರು ಜನ ವಸತಿ ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ್ದಾರೆ. ಇಲ್ಲಿ ಸಮಸ್ಯೆ ಇದೆಯೆಂದು ಗೊತ್ತಾಯಿತು. ಅದಕ್ಕಾಗಿ ಸ್ಥಳ ವೀಕ್ಷಣೆಗೆ ಬಂದಿದ್ದೇನೆ. ಮುಂದಿನ ದಿನಗಲ್ಲಿ ಯಾವ ರೀತಿಯಾಗಿ ಸಮಸ್ಯೆ ಬಗೆಹರಿಸಲು ಸಾಧ್ಯ ನೋಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಹೆರಳೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವ ನಾಯ್ಕ್, ಇಂಜಿನಿಯರ್ ರಾಜಶೇಖರ್, ಆರ್. ಐ. ಸದಾಶಿವ ನಿಂಬಾಳ್ಕರ್, ಉಳ್ತೂರು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ, ಬಿಜೆಪಿ ಸ್ಥಳೀಯ ಮುಖಂಡ ಅವಿನಾಶ್ ಉಳ್ತೂರು ಮೊದಲಾದವರು ಉಪಸ್ಥಿತರಿದ್ದರು.


































