ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪೊಲೀಸ್ ಆಧಿಕಾರಿಗಳು ಚಾಲನೆ ನೀಡಿದ ಬಳಿಕ ರಥೋತ್ಸವ ಆರಂಭಗೊಳ್ಳುವ ಒಂದು ಸಂಪ್ರದಾಯ, ಆಚರಣೆ ಬ್ರಹ್ಮಾವರ ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿದೆ.
ಏಪ್ರಿಲ್ ೧೬ ರಿಂದ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಿ ರಥೋತ್ಸವದ ದಿನವಾದ ಶುಕ್ರವಾರ ಸಂಜೆ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಅರ್ಚಕರು ಸೇರಿದಂತೆ ದೇವಸ್ಥಾನದ ಧಾರ್ಮಿಕ ಕಟ್ಟುಪಾಡುಗಳಾದ ಬಿರುದು, ಬಾವಲಿ, ಚಾಮರ, ಕಟ್ಟೆ ಕೋಲು ಸಹಿತ ಬ್ಯಾಂಡು, ವಾದ್ಯ ನಾದದೊಂದಿಗೆ ಮೆರವಣಿಗೆ ಮೂಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ಬರುತ್ತಾರೆ.

ಬಳಿಕ ದೇವಸ್ಥಾನದ ಮುಖ್ಯಸ್ಥರು ಠಾಣಾಧಿಕಾರಿಯವರಲ್ಲಿ ದೇವಸ್ಥಾನದ ರಥೋತ್ಸವ ಸಾಂಗವಾಗಿ ನೆರವೇರಿಸಿಕೊಡುವಂತೆ ವಿನಂತಿಸುತ್ತಾರೆ.
ಈ ಅವಧಿಯಲ್ಲಿ ಠಾಣೆ ವತಿಯಿಂದ ದೇವಸ್ಥಾನಕ್ಕೆ ಹೂವು, ಹಣ್ಣು ಕಾಯಿಯನ್ನು ದೇವಸ್ಥಾನಕ್ಕೆ ಸಮರ್ಪಿಸುತ್ತಾರೆ. ಮತ್ತು ಬಂದವರೆಲ್ಲರಿಗೆ ತಂಪು ಪಾನೀಯವಾಗಿ ಬೆಲ್ಲದ ಪಾನಕವನ್ನು ಠಾಣೆ ಸಿಬ್ಬಂದಿಗಳು ನೀಡುತ್ತಾರೆ.
ಬಳಿಕ ಠಾಣೆಯಿಂದ ೧.೫ ಕಿಮಿ ದೂರ ಮೆರವಣಿಗೆ ಮೂಲಕ ಅಧಿಕಾರಿಯವರನ್ನು ರಥ ಬೀದಿಯಿಂದ ಸಾಗಿ ರಥದ ಮುಂದೆ ಮೊದಲು ಠಾಣಾಧಿಕಾರಿಯವರು, ಆ ಬಳಿಕ ಗ್ರಾಮದ ಮುಖ್ಯಸ್ಥರು ಇನ್ನಿತರು ತೆಂಗಿನ ಕಾಯಿಯನ್ನು ರಥಕ್ಕೆ ಒಡೆದ ಬಳಿಕ ರಥೋತ್ಸವ ಚಾಲನೆ ಗೊಳ್ಳುತ್ತದೆ.

೧೯೩೫ ರಿಂದ ಬ್ರಹ್ಮಾವರ ಪೋಲೀಸ್ ಠಾಣೆ ಆರಂಭಗೊಂಡ ಕುರಿತು ದಾಖಲೆ ಇದೆ. ಈ ತನಕ ೩೫ ಮಂದಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದ ಹೆಸರುಗಳು ಠಾಣೆಯ ನಾಮ ಫಲಕದಲ್ಲಿದೆ. ಈ ವರ್ಷ ೩೬ ನೇ ಠಾಣಾಧಿಕಾರಿಯಾಗಿ ಗುರುನಾಥ್ ಬಿ. ಹಾದಿಮನೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
೨ ವರ್ಷದಿಂದ ಕೊರೋನ ಹಿನ್ನೆಲೆಯಲ್ಲಿ ಬ್ರಹ್ಮಾವರ ರಥೋತ್ಸವ ಇಲ್ಲದ ಕಾರಣ ಈ ವರ್ಷ ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಈ ಆಚರಣೆ ಯಾವಾಗ ಯಾಕೆ ಆರಂಭಗೊಂಡಿತು ಎನ್ನುವ ಕುರಿತು ಮಾಹಿತಿ ಇಲ್ಲ. ಆದರೆ, ಪ್ರತೀ ವರ್ಷ ಇದೊಂದು ಆಚರಣೆ ಹಿಂದಿನಿಂದಲೂ ಇದೆ ನಾವು ಅದನ್ನು ಮುಂದುವರಿಸುತ್ತಿದ್ದೇವೆ.ಲಕ್ಷ್ಮೀನಾರಾಯಣ ಭಟ್, ಆಡಳಿತಾಧಿಕಾರಿ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಾವರ

ಪೊಲೀಸ್ ಇಲಾಖೆ ರಥೋತ್ಸವದ ಸಮಯದಲ್ಲಿ ಕೇವಲ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ಮಾತ್ರ ಅಂತ ತಿಳಿದಿದ್ದೆ. ಆದರೆ, ಬ್ರಹ್ಮಾವರದ ರಥೋತ್ಸವದಲ್ಲಿ ಇಲಾಖೆಗೆ ಒಂದು ವಿಶೇಷ ಮಾನ್ಯತೆ ಇರುವುದು ಮತ್ತು ಈ ವರ್ಷ ಅದು ನನಗೆ ದೊರಕಿರುವುದು ಪುಣ್ಯ ಎಂದು ಭಾವಿಸುತ್ತೇನೆ.ಗುರುನಾಥ್ ಬಿ. ಹಾದಿಮನೆ, ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ


































