ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದ್ದು, ಶ್ರೇಷ್ಠ ಮರದ ವಿಶಿಷ್ಟ ಕೆತ್ತನೆಗಳಿಂದ ಕೂಡಿದ ದೇವರ ವಿಗ್ರಹಗಳನ್ನು ಹೊಂದಿದೆ. ಶ್ರೀದೇವರ ಮೂರ್ತಿ ಹಾಗೂ ದೇವಸ್ಥಾನ ಬಹಳ ಅಪರೂಪದಲ್ಲಿ ಪಶ್ಚಿಮಾಭಿಮುಖವಾಗಿದೆ.
365 ನಗರಿ ಬಾರಕೂರನ್ನು ಆಳಿದ ಅರಸರ, ಈಗ ಜೀರ್ಣಾವಸ್ಥೆಯಲ್ಲಿರುವ ಕೋಟೆಯು ಈ ದೇವಿಗೆ ಸಂಬಂಧ ಪಟ್ಟಿದ್ದು, ಈ ದೇವಸ್ಥಾನವನ್ನು ಕಟ್ಟಿದ ಅರಸರು ಅರಮನೆಗೆ ಅಭಿಮುಖವಾಗಿ ಕಟ್ಟಿರುವುದರಿಂದ ಮಹಾರಾಜರುಗಳ ಆರಾಧ್ಯ ದೇವಿಯಾಗಿರುತ್ತಾಳೆ.


ಪ್ರತಿ ಸಂವತ್ಸರದಲ್ಲಿ ಉತ್ತರಾಯಣ ಹಾಗೂ ದಕ್ಷಿಣಾಯಣ ಎಂಬ ಎರಡು ಆಯನಗಳಿದ್ದು ಸೂರ್ಯ ಉತ್ತರಾಯಣದಲ್ಲಿ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣಾಯಣದಲ್ಲಿ ಪೂರ್ವದಿಂದ ಪಶ್ಚಿಮಕ್ಕೂ ಚಲಿಸುತ್ತಾನೆ ಎಂಬುದು ಹಿಂದೂ ಧಾರ್ಮಿಕ ನಂಬಿಕೆ. ಉತ್ತರಾಯಣದ ಮೇಷ ಮಾಸದಲ್ಲಿ ಅಂದರೆ ಎಪ್ರಿಲ್ 23 ಮತ್ತು 24 ರಂದು ಶ್ರೀ ದೇವರಿಗೆ ಮುಸ್ಸಂಜೆಯ ಸೂರ್ಯ ರಶ್ಮಿಗಳು ಮುತ್ತಿಡುತ್ತವೆ.
ದಕ್ಷಿಣಾಯಣದ ತುಲಾ ಮಾಸದಲ್ಲಿ ಅಂದರೆ ಅಕ್ಟೋಬರ್ 23 ಮತ್ತು 24 ರಂದು ಸೂರ್ಯನ ಕಿರಣಗಳು ಶ್ರೀ ದೇವರಿಗೆ ಅಭ್ಯಂಜನ ಮಾಡಿಸುತ್ತದೆ. ಇದು ಸಂಜೆ ಸೂರ್ಯ ಪಶ್ಚಿಮಾಂಬುದಿಗೆ ತೆರಳುವ 5.30 ರಿಂದ 6.00 ರ ತನಕ ನಡೆಯುವ ಕೌತುಕ ಹಾಗೂ ವಿಸ್ಮಯ.
ಶ್ರೀ ದೇವಸ್ಥಾನದಲ್ಲಿರುವ ಸುಮಾರು 800 ವರ್ಷಗಳ ಹಿಂದಿನ ಮರದ ಕೆತ್ತನೆಗಳು ವಿಸ್ತಾರವಾದ ಚೌಕಾಕಾರದ ಬಾವಿ ಹಾಗೂ ಗರ್ಭಗುಡಿಯಲ್ಲಿರುವ ಆಳೆತ್ತರದ ವಲ್ಮೀಕ ಇವೆಲ್ಲವೂ ಸೋಜಿಗ ಮತ್ತು ನಮ್ಮ ಶ್ರೇಷ್ಠ ಪರಂಪರೆಯನ್ನು ಬಿಂಬಿಸುತ್ತವೆ.

600 ವರ್ಷಗಳಷ್ಟು ಹಿಂದೆ ಬಾರಕೂರು ಅರಸರಿಂದ ದಿವಾನರ ಪಟ್ಟ ಪಡೆದ ಮಾಸ್ತಿ ಬೈಲು ಕುಟುಂಬದವರ ಹಾಗೂ ನಂಬಿದ ಭಕ್ತರ ಆರಾಧ್ಯ ಮಾತೆಯಾಗಿದ್ದಾಳೆ ಈ ಮಹಾ ತಾಯಿ ಮಹಾ ಶಕ್ತಿ ದುರ್ಗಾಪರಮೇಶ್ವರೀ ಅಥವಾ ಮಾಸ್ತಿ ಅಮ್ಮನಾಗಿ ಭಕ್ತರ ಇಷ್ಟಾರ್ಥ ನೀಡುವ ಮಾಹಾ ಮಾತೆಯಾಗಿದ್ದಾಳೆ.



































