ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸರ್ಕಾರ ರೈತರಿಗಾಗಿ ಮಾಡಲಾದ ಅನೇಕ ಯೋಜನೆಗಳಲ್ಲಿ ನೈಸರ್ಗಿಕ ಕೃಷಿ ಮತ್ತು ಮಣ್ಣಿನ ಸತ್ವ ಕಾಪಾಡುವ ಮತ್ತು ರಕ್ಷಿಸುವ ಕುರಿತು ಮಾಹಿತಿ, ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಸಾವಯವ ಕೃಷಿ ಯೋಜನೆಯ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ರಾವ್ ಉಪ್ಪೂರು ಹೇಳಿದರು.

ಮಂಗಳವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಿದ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ನೈಸರ್ಗಿಕ ಕೃಷಿ ಯೋಜನೆ, ಕೃಷಿ ಇಲಾಖೆಯ ಆತ್ಮ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ರೈತರ ಪಾಲುದಾರಿಕೆಯ ಆದ್ಯತೆ ನಮ್ಮ ಅಭಿಯಾನ ನೈಸರ್ಗಿಕ ಕೃಷಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ ಬದಲಾಗುತ್ತಿರುವ ಎಲ್ಲಾ ಕ್ಷೇತ್ರದಲ್ಲಿ ರೈತರು ಕೂಡಾ ಬದಲಾವಣೆಗೆ ಹೊಂದಿಕೊಂಡು ಹೋಗಬೇಕಾಗಿದೆ ಎಂದರು.


ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಸಂತೋಷ್ ಗೌಡ ಜಿ.ಬಿ, ಡಾ.ಮಹಾಂತೇಶ್, ಸ್ವಾತಿ ಶೆಟ್ಟಿ ವೈ ,ನೈಸರ್ಗಿಕ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಬಿರಾದಾರ್, ಕೃಷಿ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಉಪಸ್ಥಿತರಿದ್ದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷಿ ವಿಜ್ಞಾನಿಗಳಾದ ಡಾ.ಚೈತನ್ಯ ಎಚ್ ಎಸ್ ವಂದಿಸಿದರು. ಡಾ.ಸಚಿನ್ ಯು ಎಸ್ ಕಾರ್ಯಕ್ರಮ ನಿರೂಪಿಸಿದರು.



































