ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ತಾಲೂಕಿನ ಹೊಸೂರು ಗ್ರಾಮದ ಕರ್ಜೆಯಲ್ಲಿ ದಲಿತರ ನಿಧಿ ದುರ್ಬಳಕೆ ಮಾಡಿ ಮೀಸಲು ಅರಣ್ಯದಲ್ಲಿ ರಸ್ತೆ ಮಾಡಿದ ಕುರಿತು ಆರ್ ಟಿ ಐ ಮತ್ತು ಸಾಮಾಜಿಕ ಹೋರಾಟ ಸಮಿತಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಇನ್ನಿತರ ಸಂಘ ಸಂಸ್ಥೆಯವರ ಮೂಲಕ ಗುರುವಾರ ರಸ್ತೆಯ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ.

ಈ ಸಂದರ್ಭ ಸಾಮಾಜಿಕ ಹೋರಾಟಗಾರ ಬಾರಕೂರು ಸತೀಶ್ ಪೂಜಾರಿ ಮಾತನಾಡಿ, ಎಷ್ಟೋ ಮಂದಿ ವಸತಿ ರಹಿತರು ಕೇವಲ 3 ಸೆನ್ಸ್ ಜಾಗಕ್ಕಾಗಿ ಸರಕಾರಿ ಜಾಗದಲ್ಲಿ ಮನೆ ನಿವೇಶನಕ್ಕಾಗಿ ಸಾವಿರಾರು ಮಂದಿ ಇದ್ದಾರೆ. ಆದರೆ, ಇದು ಮೀಸಲು ಅರಣ್ಯ ಪ್ರದೇಶ ಜಾಗದಲ್ಲಿ ಕೇವಲ ಸುಮತಿ ಬಾಯಿ ಎನ್ನುವ ಪರಿಶಿಷ್ಟ ಓರ್ವ ಹೆಂಗಸಿನ ಮನೆಗೆ 2 ಕಿಮಿ ದೂರದ ರಸ್ತೆಗೆ 2 ಕೋಟಿ ಹಣ ಮಂಜೂರು ಮಾಡಿದ್ದಾರೆ . ಅದಲ್ಲದೆ ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರ ಜಲ್ಲಿ ಕ್ರಷರ್ ಒಂದಕ್ಕೆ ಸಂಚರಿಸಲು ರಸ್ತೆ ಮಾಡಲಾಗಿದೆ. ಅಭಿವೃದ್ಧಿ ಅಂದರೆ ಕೇವಲ ರಸ್ತೆ ಮಾಡುವುದು ಮಾತ್ರ ಅಲ್ಲ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದಲ್ಲಿ ಮಂಜೂರಾತಿ ಪಡೆದ ಈ ರಸ್ತೆ ಕಾಮಗಾರಿಯನ್ನು ತಡೆ ಹಿಡಿಯುವಂತೆ ಇಲ್ಲಿನ ಜಯಕರ ನಾಯ್ಕ್ ಎನ್ನುವವರು ವಿನಂತಿಸಿದರೆ, ಇದು ಶಾಸಕ ರಘುಪತಿ ಭಟ್ ಇವರ ವ್ಯಾಪ್ತಿಯದು ಎಂದು ನುಣುಚಿ ಕೊಳ್ಳುತ್ತಿದ್ದಾರೆ ಎಂದು ದೂರಿದರು.
ದಲಿತ ಸಂಘರ್ಷ ಸಮಿತಿಯ ಶೇಖರ ಹಾವಂಜೆ ಮಾತನಾಡಿ, ಇದು ದಲಿತರ ನಿಧಿ ದುರ್ಬಳಕೆಯಾಗಿದೆ. ಇದು ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ ಅರಣ್ಯ ಇಲಾಖೆಯ ಮುಖ್ಯಸ್ಥರು ಘಟನೆಯ ಸ್ಥಳಕ್ಕೆ ಬಂದು ರಸ್ತೆ ಕಾಮಗಾರಿಯನ್ನು ತಡೆ ಹಿಡಿಯುವ ತನಕ ಆಹೋ ರಾತ್ರಿ ಧರಣಿ ಮಾಡುವುದಾಗಿ ಹೇಳಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿರುವುದನ್ನು ಮನಗಂಡು ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಯವರು ಕಂದಾಯ ಇಲಾಖೆ ಅರಣ್ಯ ಇಲಾಖೆಯ ಮುಖ್ಯಸ್ಥರನ್ನು ಬರುವಂತೆ ವಿನಂತಿಸಿದ ಬಳಿಕವೂ ಪ್ರತಿಭಟನಾ ಕಾರರಿಂದ ರಸ್ತೆ ಕಾಮಗಾರಿ ನಿಲ್ಲಿಸಿ 2 ಕೋಟಿ ಹಣವನ್ನು ಕ್ರಷರ್ ಮಾಲಿಕರಿಂದ ವಸೂಲಿ ಮಾಡಿ ಇದರ ನಿಧಿಯನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿ ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆಯ ಅನಿಲ್ ಕುಮಾರ್ , ಕಂದಾಯ ಇಲಾಖೆಯ ರಾಘವೇಂದ್ರ , ಲಕ್ಷ್ಮೀ ನಾರಾಯಣ ಭಟ್ ಲೋಕೋಪಯೋಗಿ ಇಲಾಖೆಯ ಗಿರೀಶ್ ಪರವಾಗಿ ಸವಿತಾ ಘಟನೆಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರಿಂದ ಮನವಿ ಪಡೆದು ಉನ್ನತ ಅಧಿಕಾರಿಗಳಿಗೆ ತಿಳಿಸುದಾಗಿ ಹೇಳಿದರು.
ಸದಾಶಿವ ಶೆಟ್ಟಿ ಹೇರೂರು , ಜಯಕರ ನಾಯ್ಕ್ , ಗೋಪಾಲ್ ಇಸರ್ ಮಾರ್ ರಮೇಶ್ ಹರಿಖಂಡಿಗೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.


































