ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬುಧವಾರ ನಿಗದಿಯಾಗದ ಸಭೆಯಲ್ಲಿ ಹಣಕಾಸು ನೀತಿ ಸಮಿತಿ (MPC) ಒಮ್ಮತದಿಂದ 40 ಬಿಪಿಎಸ್ ದರಗಳನ್ನ ಹೆಚ್ಚಿಸಿದೆ ಎಂದು ಹೇಳಿದರು.
ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಪ್ರಸ್ತಾಪಿಸಿದರು. ಹಲವು ಕಾಲದಿಂದ ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬರಲಾಗಿದ್ದ ರೆಪೋ ದರದಲ್ಲಿ 40 ಮೂಲಾಂಕದಷ್ಟು ಏರಿಕೆ ಮಾಡುವ ನಿರ್ಧಾರವನ್ನು ಹೇಳಿದ್ದಾರೆ. ಇದರೊಂದಿಗೆ ರೆಪೋ ದರ ಶೇ. 4.40ಕ್ಕೆ ಏರಿದಂತಾಗಿದೆ. 2018ರ ನಂತರ ಇದೇ ಮೊದಲ ಬಾರಿಗೆ ರೆಪೋ ದರದಲ್ಲಿ ಬದಲಾವಣೆ ಆಗಿದೆ.
ಮಾನಿಟರಿ ಪಾಲಿಸಿ ಕಮಿಟಿ ಮೇ 2ರಿಂದ ಸಭೆ ನಡೆಸಿ ಆರ್ಥಿಕ ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬುದನ್ನು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐ ಅನಿವಾರ್ಯವಾಗಿ ಮಧ್ಯಪ್ರವೇಶಿಸಬೇಕಾಗಿದೆ.

ಜಾಗತಿಕ ಆರ್ಥಿಕತೆ ಹಿನ್ನಡೆಯಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ಆರ್ಥಿಕ ಚೇತರಿಕೆ ಹಳಿ ತಪ್ಪುತ್ತಿದೆ. ಇತ್ತೀಚಿನ ಜಿಡಿಪಿ ವಿವರಗಳು ಜಾಗತಿಕ ಆರ್ಥಿಕ ಹಿನ್ನಡೆಗೆ ಕೈಗನ್ನಡಿ ಹಿಡಿದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ವಿಶ್ವದಾದ್ಯಂತ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಆರ್ಥಿಕ ಹಿನ್ನಡೆಗೆ ಕಡಿವಾಣ ಹಾಕಲು ವಿವಿಧ ದರಗಳನ್ನು ಏರಿಕೆ ಮಾಡುವ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಆರ್‌ಬಿಐ ಕೆಲ ಸೂಕ್ತ ಕ್ರಮಗಳಿಗೆ ಮುಂದಾಗಿದೆ. ಆ ಸಂಬಂಧ ಮೊನ್ನೆಯಿಂದ ಆರ್‌ಬಿಐನ ಎಂಪಿಸಿ ಸಭೆ ನಡೆಸಿ ಚರ್ಚಿಸಲಾಗಿತ್ತು
ಆರ್ಥಿಕ ಪ್ರಗತಿಗೆ ಪುಷ್ಟಿ ಕೊಡುವ ಉದ್ದೇಶದಿಂದ ರೆಪೋ ಮತ್ತು ಸಿಆರ್‌ಆರ್ ದರಗಳನ್ನ ಏರಿಸಲಾಗಿದೆ ಎಂದು ವರದಿ ಹೇಳಿದೆ.

