ಪರ್ಕಳ : ಇಲ್ಲಿನ ಕೆಳಪರ್ಕಳದ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹಿಂಬದಿ ಇರುವ, ಛಾಯಾಗ್ರಾಹಕ ಮಹೇಶ್ ಕುಲಾಲ್ ಅವರ ಕುಟುಂಬಕ್ಕೆ ಸೇರಿದ ಗುಡ್ಡದ ಪ್ರದೇಶದಲ್ಲಿ ಸುರಂಗದಂತೆ ಇರುವ ಪ್ರದೇಶಕ್ಕೆ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚ್ಯಮತ್ತು ಪುರಾತತ್ವ ಸಂಶೋಧಕರಾದ ಪ್ರೊ.ಟಿ.ಮುರುಗೇಶಿಯವರು ಸ್ಥಳಕ್ಕೆ ಭೇಟಿ ನೀಡಿ, ಸಂಶೋಧನಾರ್ಥಿಯನ್ನು ಸುರಂಗದೊಳಗೆ ಕಳುಹಿಸಿ, ಪರಿಶೀಲಿಸಿದರು.
ಮುಂದಕ್ಕೆ ಹೋದಂತೆ ಮಣ್ಣು ಕುಸಿದರಿಂದ ಒಳಗಿನ ಭೂಭಾಗಕ್ಕೆ ಹೋಗಲಾಗಲಿಲ್ಲ,. ಮುಂದಿನ ದಿನಗಳಲ್ಲಿ ಸುರಂಗದೊಳಗೆ ಹೊಕ್ಕಿ ವೀಕ್ಷಣೆ ಮಾಡಿದಾಗ, ಒಳಗಡೆ ಮಣ್ಣು ಜರಿದು ಇರುವುದು ಕಂಡುಬಂದಿದೆ. ಮಣ್ಣನ್ನು ಮೇಲಕ್ಕೆ ಎತ್ತುವ ಎಲ್ಲ ಪ್ರಕ್ರಿಯೆಗಳು ನಡೆಯಬೇಕಾಗಿದೆ. ನಂತರ ಈ ಸುರಂಗದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬಹುದು ಎಂದವರು ತಿಳಿಸಿದ್ದಾರೆ.

ಈಗಾಗಲೇ ಒಳಗೆ ಇನ್ನಷ್ಟು ವಿಶಾಲವಾದ ಪ್ರದೇಶ ಇದೆ ಎಂದು ಮೊದಲ ಮಾಹಿತಿಯಿಂದ ಒಳ ಹೊಕ್ಕಿದಾಗ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ಅಧ್ಯಯನಕ್ಕಾಗಿ ಸ್ಥಳದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಟಿ, ಮುರುಗೇಶಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಪ್ರೊಫೆಸರ್ ಟಿ. ಮುರುಗೇಶಿ, ಸಂಶೋಧನಾರ್ಥಿ ವಿದ್ಯಾರ್ಥಿ ಭಟ್, ಸ್ಥಳೀಯರಾದ ತಿಮ್ಮಪ್ಪ ಶೆಟ್ಟಿ ಕುಕ್ಕುದಕಟ್ಟೆ, ಗಣೇಶ್ ರಾಜ್ ಸರಳೇಬೆಟ್ಟು, ವಿನೋದ್ ಭಟ್, ಸಂಶೋಧನಾರ್ಥಿ ಶ್ರೇಯಸ್ ಭಟ್ ಹಾಗೂ ಮಹೇಶ್ ಕುಲಾಲ್ ಅವರ ಕುಟುಂಬಸ್ಥರು ಜೊತೆಗಿದ್ದರು.



































