ನವದೆಹಲಿ : ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ, 10 ಲಕ್ಷ ರೂ. ದಂಡ ಕಟ್ಟುವಂತೆಯೂ ಆದೇಶ ನೀಡಿದೆ.
ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ಎನ್‌ಐಎ ನ್ಯಾಯಾಧೀಶ ಪ್ರವೀಣ್ ಸಿಂಗ್ ಈ ಶಿಕ್ಷೆ ಪ್ರಕಟಿಸಿದ್ದಾರೆ. ಇದಕ್ಕಿಂತ ಮುನ್ನ ಯಾಸಿನ್ ಮಲಿಕ್ ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದೆಹಲಿ ಕೋರ್ಟಿಗೆ ಕೋರಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
2017 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನಿಧಿ, ಭಯೋತ್ಪಾದನೆ ಹರಡುವಿಕೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪಗಳಿಗೆ ಮಲಿಕ್ ತಪ್ಪೊಪ್ಪಿಕೊಂಡ ನಂತರ ದೆಹಲಿ ನ್ಯಾಯಾಲಯವು ಕಳೆದ ವಾರ ಮಲಿಕ್ ಅಪರಾಧಿ ಎಂದು ಘೋಷಿಸಲಾಗಿತ್ತು.

ಯಾಸಿನ್ ಮಲಿಕ್ ವಿರುದ್ಧದ ತೀರ್ಪಿಗೆ ಮುನ್ನ ಎನ್‌ಐಎ ಮತ್ತು ದೆಹಲಿ ಪೊಲೀಸರು ಭಾರೀ ಭದ್ರತೆಯನ್ನು ಏರ್ಪಡಿಸಿದ್ದಾರೆ.
ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಎಲ್ಲ ಆರೋಪಗಳಲ್ಲಿಯೂ ತಾನು ತಪ್ಪಿತಸ್ಥ ಎಂದು ಮೇ 10 ರಂದು ಯಾಸಿನ್ ಮಲಿಕ್ ತಪ್ಪೊಪ್ಪಿಕೊಂಡಿದ್ದ.
2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.
ಯಾಸಿನ್ ಮಲಿಕ್ 2019ರಿಂದಲೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದ. ಆತನ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿತ್ತು.
