ವರದಿ: ಶಫೀ ಉಚ್ಚಿಲ
ಕಾಪು : ಕಾಲ್ನಡಿಗೆ ಮೂಲಕ ಹಜ್ ಯಾತ್ರೆ ಹೊರಡುವ
ಬಾಲ್ಯದ ಸಂಕಲ್ಪವನ್ನು ಪೂರ್ತಿಗೊಳಿಸಲು ಕೇರಳದ ಮಲಪ್ಪುರಂ ಜಿಲ್ಲೆಯ ಶಿಹಾಬ್ ಚೊಟ್ಟುರು ಪವಿತ್ರ ಮಕ್ಕಾದತ್ತ ಹೆಜ್ಜೆ ಇಟ್ಟಿದ್ದಾರೆ.

ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಕೊನೆಯ ಕಡ್ಡಾಯ ಕರ್ಮವಾಗಿದೆ ಹಜ್ಜ್ ನಿರ್ವಹಿಸುವುದು.ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ಪುಣ್ಯಯಾತ್ರೆಯ ಹೆಸರೇ ಹಜ್ಜ್ ಆಗಿರುತ್ತದೆ.

ಕಾಲ್ನಡಿಗೆ ಮೂಲಕ ಹಜ್ ಯಾತ್ರೆಗೆ ಬೇಕಾದ ಎಲ್ಲಾ ಪೂರ್ವ ತಯಾರಿಯನ್ನು ನಡೆಸಿ,ಕೇರಳದ ಮಲಪ್ಪುರಂನಿಂದ ಜೂ.2 ರಂದು ಕಾಲ್ನಡಿಗೆ ಯಾತ್ರೆಯನ್ನು ಆರಂಭಿಸಿ ಜೂ 9 ರಂದು ಕರ್ನಾಟಕ ಪ್ರವೇಶಿಸಿ ದ.ಕ ಜಿಲ್ಲೆಯನ್ನು ದಾಟಿ ಬಂದ ಯುವಕ ಶಿಹಾಬ್. ಇವರನ್ನು ಶನಿವಾರ ಉಡುಪಿ ಜಿಲ್ಲೆಯ ಗಡಿ ಪ್ರದೇಶ ಹೆಜಮಾಡಿಯಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು.ಬಳಿಕ ರಾಷ್ಟ್ರೀಯ ಹೆದ್ದಾರಿ ಮೂಲಕ ಉಚ್ಚಿಲ ಮೂಳೂರಿನತ್ತ ಆಗಮಿಸಿದ ಇವರೊಂದಿಗೆ ರಸ್ತೆಯುದ್ದಕ್ಕೂ ಜನರು ಹೆಜ್ಜೆ ಹಾಕಿ ಘೋಷಣೆ ಕೂಗಿದರು.ಕಾಲ್ನಡಿಗೆ ಮೂಲಕ ಸಾಗಿಬಂದ ಶಿಹಾಬ್ ಅವರನ್ನು ಮೂಳೂರು ಮಸೀದಿಯಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು,9 ತಿಂಗಳ ಅವಧಿಯಲ್ಲಿ ಭಾರತ,ಪಾಕಿಸ್ತಾನ, ಇರಾನ್,ಇರಾಕ್,ಕುವೈಟ್ ದಾರಿಯಾಗಿ ಸೌಧಿ ಅರೇಬಿಯಾಕ್ಕೆ ತಲುಪಿ 8640 ಕ್ಕೂ ಅಧಿಕ ಕಿ.ಮೀ ಕ್ರಮಿಸುವ ಮೂಲಕ ಪವಿತ್ರ ಮಕ್ಕಾ ಯಾತ್ರೆಯನ್ನು ಪೂರ್ತಿಗೊಳಿಸಿ ಹಜ್ ನಿರ್ವಹಿಸಲಿದ್ದೇನೆ.”ನನ್ನ ಬಾಲ್ಯದ ಕನಸು ಇದಾಗಿದ್ದು,ಕೇವಲ ಅಲ್ಲಾಹನ ಮೇಲಿನ ವಿಶ್ವಾಸದೊಂದಿಗೆ ಈ ಯಾತ್ರೆಯನ್ನು ಕೈಗೊಂಡಿದ್ದೇನೆ.ದಾರಿಯಲ್ಲಿ ನನ್ನ ಯಾತ್ರೆಯನ್ನು ಗಮನಿಸಿದ ಜನರು ಉತ್ಸಾಹದಿಂದ ನನ್ನ ಯಾತ್ರೆಗೆ ಸಹಕರಿಸುತ್ತಿದ್ದಾರೆ.ಕೇರಳದಿಂದ ಆಗಮಿಸಿದ ನನಗೆ ಇದುವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.ನನ್ನ ಯಾತ್ರೆಯಿಂದಾಗಿ ಯಾರಿಗೂ ಸಮಸ್ಯೆ ಉಂಟಾಗದಂತೆ ನನ್ನೊಂದಿಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.

ಮೂಳೂರಿನಲ್ಲಿ ಉಪಹಾರ ಮುಗಿಸಿ ಉಡುಪಿ ಕಡೆಗೆ ಯಾತ್ರೆಯನ್ನು ಮುಂದುವರಿಸಿದ್ದಾರೆ.




































