ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರಕ್ತ ಚಂದನ ಗಿಡ ನೆಡುವಾಗ ಆದಾಯದ ಲೆಕ್ಕ ಹಾಕುವುದಕ್ಕಿಂತ ನಮ್ಮ ಪರಿಸರಕ್ಕೆ ಆ ಮರ ನೀಡುವ ಆಮ್ಲ ಜನಕಕ್ಕೆ ಬೆಲೆಕಟ್ಟಲಾಗದಷ್ಟಿದೆ ಎಂದು ಬ್ರಹ್ಮಾವರ ಪೊಲೀಸ್ ವೃತ್ತ ನೀರೀಕ್ಷಕ ಅನಂತ ಪದ್ಮನಾಭ ಹೇಳಿದರು.

ಭಾನುವಾರ ಎಳ್ಳಂಪಳ್ಳಿ ಶ್ರೀ ದುರ್ಗಾ ಪರಮೇಶ್ವರೀ ಗ್ರಾಮಾಭಿವೃದ್ಧಿ ಸಂಸ್ಥೆಯವರು 5 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡುವ ರಕ್ತ ಚಂದನ ಗಿಡಗಳನ್ನು ವಿತರಿಸಿ ಮಾತನಾಡಿ, ಮನೆಗಳಲ್ಲಿ ಶುಭ ಸಮಾರಂಭದ ನೆನಪಿಗೆ ಗಿಡ ನೆಡುವ ಮತ್ತು ಪೋಷಿಸುವ ಸಂಕಲ್ಪ ಗ್ರಾಮೀಣ ಭಾಗವಾದ ಇಲ್ಲಿಂದಲೆ ಹಸಿರು ಕ್ರಾಂತಿ ಆರಂಭವಾಗಲಿ. ಮುಂದಿನ ವರ್ಷ ಗಂಡು ಮಕ್ಕಳಿಗೆ ಕೂಡಾ ಗಿಡ ನೀಡುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ನಿವೃತ್ತ ಶಿಕ್ಷಕ ಪುಟ್ಟಯ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ, ಇದು ನಮ್ಮ ಸಂಸ್ಥೆಯವರು ಉಚಿತವಾಗಿ ನೀಡುತ್ತಿರುವ 6 ನೇ ವರ್ಷ ಈ ಹಿಂದೆ ಕೊಂಡು ಹೋದವರು ಅದನ್ನು ಬೆಳೆಸಿದ ರೀತಿ ಮತ್ತು ಕ್ರಮವನ್ನು ಸ್ವತಹ: ನಾನು ಗಮನಿಸುತ್ತೇನೆ. ನೀವು ಗಿಡವನ್ನು ಬೆಳೆಸಿ ಅದನ್ನು ಪೋಷಿಸಿ ಅದರ ಮೌಲ್ಯವನ್ನು ನೀವೇ ಪಡೆಯಿರಿ. ಅದೇ ನಮಗೆ ನೀವು ನಮ್ಮ ಊರು ಪರಿಸಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು.


ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ್, ಉಪ ವಲಯ ಅರಣ್ಯ ಅರಣ್ಯಾಧಿಕಾರಿ ಹರೀಶ್ ಉಪಸ್ಥಿತರಿದ್ದರು.
ಈ ಹಿಂದೆ ತಿಳಿಸಿದಂತೆ ಸ್ವಂತ ಜಾಗದ ದಾಖಲೆ ನೀಡಿ ಹೆಸರು ನೊಂದಾಯಿಸಿದ ಬೈಂದೂರು, ಕಾರ್ಕಳ, ಪೆರ್ಡೂರು, ಕಾಪು, ಕುಂದಾಪುರ ಹಾಗೂ ಇತರ ಜಿಲ್ಲೆಯಾದ ಶೃಂಗೇರಿ, ಕೊಪ್ಪ ಭಾಗದಿಂದ 150 ಕ್ಕೂ ಹೆಚ್ಚು ತಾಯಂದಿರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಪ್ರತೀ ಹೆಣ್ಣು ಮಗುವಿಗೆ 15 ಗಿಡವನ್ನು ಉಚಿತವಾಗಿ ನೀಡಲಾಯಿತು.




































