ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಹೇನಬೇರುವಿನಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಬೈಂದೂರು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಕಾರ್ಕಳ ಮೂಲದ ಮೇಸ್ತ್ರಿ ಆನಂದ ದೇವಾಡಿಗ(55) ಕೊಲೆಗೀಡಾದ ವ್ಯಕ್ತಿ. ಕಾರಿನ ಮಾಲಕ ಕಾರ್ಕಳದ ಮಾಳದ ಸದಾನಂದ ಶೇರೆಗಾರ್ (54), ಕೃತ್ಯಕ್ಕೆ ಸಹಕರಿಸಿದ ಶಿಲ್ಪಾ(30), ಹಾಗೂ ನಿತಿನ್ ಅಲಿಯಾಸ್ ನಿತ್ಯಾನಂದ ದೇವಾಡಿಗ(40), ಸತೀಶ್ ಆರ್ ದೇವಾಡಿಗ(40) ರನ್ನು ಪೊಲೀಸರು ಬಂಧಿಸಿದ್ದಾರೆ.
ಸುಟ್ಟು ಹೋದ ಕಾರಿನ ಚೆಸ್ಸಿಯನ್ನು ಫೊರೆನ್ಸಿಕ್ ತಜ್ಞರು ಪರಿಶೀಲಿಸಿ, ಮಾಲಕರ ವಿವರ ಪತ್ತೆ ಹಚ್ಚಿದ್ದು, ಪ್ರಕರಣ ಭೇದಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿದು ಬಂದಿದೆ.


ಏನಿದು ಕೃತ್ಯ?

ಸದಾನಂದ ಶೇರೆಗಾರ್ ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಎನ್ನಲಾಗಿದೆ. ಹಳೆ ಕೇಸೊಂದರಲ್ಲಿ ತನಗೆ ಶಿಕ್ಷೆಯಾಗುವ ಭಯದಲ್ಲಿ ಈ ಕೃತ್ಯ ಎಸಗಿದ್ದಾನೆ. ಆದರೆ, ಅದಕ್ಕೆ ಬಲಿಯಾಗಿದ್ದು ಆನಂದ ದೇವಾಡಿಗ. ಹಳೇ ಕೇಸ್ ಒಂದರಲ್ಲಿ ಶಿಕ್ಷೆಯಾಗುವ ಭಯದಲ್ಲಿ ತಾನು ಸತ್ತು ಹೋಗಿದ್ದೇನೆಂದು ಬಿಂಬಿಸಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತನ್ನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈದು, ತಾನೇ ಸತ್ತಿರುವುದೆಂದು ತೋರಿಸಲು ಈ ಕೃತ್ಯ ಎಸಗಿದ್ದ.
ಇದಕ್ಕೆ ಸಹಕರಿಸಿದ್ದು ಶಿಲ್ಪ ಎಂಬ ಮಹಿಳೆ. ಮೇ 12 ರಂದು ಈಕೆಯ ಸ್ನೇಹಿತ ಕಾರ್ಕಳದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಆನಂದ ದೇವಾಡಿಗನನ್ನು ಆಕೆಯ ಸಹಕಾರದೊಂದಿಗೆ ಬಾರ್ ಗೆ ಕರೆದು ತಂದು, ಕಂಠಪೂರ್ತಿ ಕುಡಿಸಿದ್ದರು ಎನ್ನಲಾಗಿದೆ. ರಾತ್ರಿ ನಿದ್ರೆ ಮಾತ್ರೆ ನುಂಗಿಸಿ ಬೈಂದೂರಿನತ್ತ ಬಂದಿದ್ದರು.
ಜು.12 ರ ರಾತ್ರಿ 12.30 ರ ಸುಮಾರಿಗೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಇವರು ಬೈಂದೂರಿನತ್ತ ಸಾಗಿರುವ ದೃಶ್ಯ ಸೆರೆಯಾಗಿತ್ತು. ಮಹಿಳೆ ಕಾರಿನಿಂದ ಟೋಲ್ ನೀಡಿರುವುದೂ ಕಂಡು ಬಂದಿತ್ತು. ಬಳಿಕ ಹೇನ್ ಬೇರುವಿನಲ್ಲಿ ಕಾರು ನಿಲ್ಲಿಸಿ, ನಿದ್ದೆ ಮಂಪರಿನಲ್ಲಿದ್ದ ಆನಂದ ದೇವಾಡಿಗನನ್ನು ಒಳಗೆ ಇರಿಸಿ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡಿ ಪೆಟ್ರೋಲ್ ಸುರಿದಿದ್ದಾರೆ. ಬಳಿಕ ಬೆಂಕಿ ಹಚ್ಚಿ, ಪರಾರಿಯಾಗಿದ್ದಾರೆ.
ಬಳಿಕ ಇಬ್ಬರೂ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದಾಗ ಬಸ್ ಹಾಳಾದ ಕಾರಣ ಮತ್ತೆ ಮೂಡುಬಿದಿರೆಗೆ ಬಂದಿದ್ದಾರೆ. ಬೆಳಿಗ್ಗೆ ಕಾರ್ಕಳಕ್ಕೆ ಬಸ್ ನಲ್ಲಿ ಬರುತ್ತಿದ್ದ ವೇಳೆ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಇವರಿಬ್ಬರಿಗೆ ಸಹಕರಿಸಿದವರನ್ನೂ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಕುಂದಾಪುರ ಡಿ ವೈ ಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿ ಎಸ್ ಐ ಪವನ್ ನಾಯಕ್, ಗಂಗೊಳ್ಳಿ ಪಿ ಎಸ್ ಐ ವಿನಯ್ ಎಂ, ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಸಿಬ್ಬಂದಿಗಳಾದ ಶಾಂತರಾಮ ಶೆಟ್ಟಿ, ನಾಗೇಂದ್ರ, ಕೃಷ್ಣ ದೇವಾಡಿಗ, ಮೋಹನ ಪೂಜಾರಿ, ಸುಜಿತ್, ಪ್ರಿನ್ಸ್, ಚಂದ್ರಶೇಖರ, ಅಣ್ಣಪ್ಪ ಪೂಜಾರಿ, ಮೋಹನ ಪೂಜಾರಿ, ಚಾಲಕ ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



































