ಬೆಂಗಳೂರು: ಕೇಂದ್ರ ಸರ್ಕಾರದಿಂದ ನಾಳೆಯಿಂದ ಜಾರಿಗೆ ಬರುವಂತೆ ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ ದರ ವಿಧಿಸಲಾಗುತ್ತಿದೆ. ಈ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ದರವನ್ನು ಕೂಡ ಕೆಎಂಎಫ್ ನಿಂದ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ರಾಹಕರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.
ಈ ಬಗ್ಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಹಾಮಂಡಳಿ ನಿಯಮಿತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯದಿಂದ ದಿನಾಂಕ 18-07-2022ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ ಎಸ್ ಟಿ ವಿಧಿಸಿರುವ ಹಿನ್ನಲೆಯಲ್ಲಿ, ನಂದಿನಿ ಮೊಸಲು, ಮಜ್ಜಿಗೆ ಮತ್ತು ಸಲ್ಲಿ ಪೊಟ್ಟಣಗಳ ಮೇಲೆ ದರಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಹೇಳಿದೆ.

ಮೊಸರು 200 ಗ್ರಾ ರೂ.10 ರಿಂದ 12 ರೂ ಆಗಲಿದೆ. 500 ಗ್ರಾಮ, ರೂ.22 ರಿಂದ 24 ರೂ ಆಗಲಿದೆ. ಮಜ್ಜಿಗೆ ಸ್ಯಾಚೆ 200 ಮಿಲಿ ರೂ.7 ಇದ್ದದ್ದು 8 ರೂ ಆಗಲಿದೆ. ಟೆಟ್ರಾ ಪ್ಯಾಕ್ 10ರೂ ನಿಂದ 11 ರೂ ಗೆ ಏರಿಕೆಯಾಗಲಿದೆ. ಪೆಟ್ ಬಾಟಲ್ ರೂ.12 ರಿಂದ 13 ರೂ ಗೆ ಹೆಚ್ಚಳವಾಗಲಿದೆ.
ಲಸ್ಸಿ 200 ಮಿಲಿ ಸ್ಯಾಚೆ ರೂ.10ರಿಂದ 11 ಗೆ ಏರಿಕೆಯಾಗಲಿದೆ. ಟೆಟ್ರಾ ಪ್ಯಾಕ್ ಸಾದ ರೂ.20 ರಿಂದ 21, ಟೆಟ್ರಾ ಪ್ಯಾಕ್ ಮ್ಯಾಂಗೋ ರೂ.25 ರಿಂದ 27, ಪೆಟ್ ಬಾಟಲ್ ಸಾದ ರೂ.15 ರಿಂದ 16 ಹಾಗೂ ಪೆಟ್ ಬಾಟಲ್ ಮ್ಯಾಂಗೋ ರೂ.20 ರಿಂದ 21 ರೂಪಾಯಿ ಹೆಚ್ಚಳವಾಗಲಿದೆ.
ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಮುಗಿಯುವವರೆಗೆ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಎಲ್ಲಾ ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಲಾಗಿದೆ.
