ಕಾಪು : ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾಪು ಶ್ರೀಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ರವಿವಾರ ಉಡುಪಿ ಹಾಗೂ ಕಾಪು ತಾಲ್ಲೂಕಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ , ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಮೂಲಕ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ನಿರಂತರ ಸಮಾಜ ಸೇವಾ ಚಟುವಟಿಕೆಗಳು ನಡೆಯುತ್ತಿವೆ.
ಉಡುಪಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಯತ್ನಕ್ಕೂ ಚಾಲನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು.

ಟ್ರಸ್ಟ್ ನ ಅಧ್ಯಕ್ಷ ಅನಂತ ಇನ್ನಂಜೆ ಇವರು ಮಾತನಾಡಿ, ಸಮಾಜದಿಂದ ಕಷ್ಟಕಾಲದಲ್ಲಿ ಪಡೆದಿರುವ ಉತ್ತಮ ಸ್ಪಂದನೆಯನ್ನು ಸಮಾಜಕ್ಕೆ ಸಕಾಲದಲ್ಲಿ ಹಿಂದೆ ನೀಡಬೇಕು ಎನ್ನುವ ಮಾತಿನಂತೆ ಸಮಾಜದಲ್ಲಿ ಅಗತ್ಯವುಳ್ಳವರ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಈ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಶಿಕ್ಷಣ, ಆಹಾರ, ಆರೋಗ್ಯ ಈ ಮೂರು ವಿಷಯದಲ್ಲಿ ಈ ಟ್ರಸ್ಟ್ ಕಾರ್ಯಾಚರಿಸುತ್ತಿದ್ದು, ಸಾಮಾಜಿಕ ಜಾಲತಾಣದ ಸದ್ವಿನಿಯೋಗದಿಂದ ಹಲವಾರು ಜನರ ಸಹಕಾರದಿಂದ ಇಂತಹ ಮಹತ್ಕಾರ್ಯವು ಸಾಧ್ಯವಾಯಿತು ಎಂದರು.
ಸಮಾಜ ಸೇವಕರು ಹಾಗೂ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಎ. ಸುವರ್ಣ ತಮ್ಮ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಿಂದ, ಪುರಸ್ಕೃತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಂಕ್ ಎಕೌಂಟ್ ಹಾಗೂ ಎ.ಟಿ.ಎಮ್ ಕಾರ್ಡ್ ನ ಸೌಲಭ್ಯಗಳನ್ನು ಒದಗಿಸಿದರು.
ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು , ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ , ಶ್ರೀರಾಮ ಸೇನೆಯ ವಲಯಾಧ್ಯಕ್ಷರಾದ ಮೋಹನ್ ಭಟ್ ಮಣಿಪಾಲ, ಸಮಾಜ ಸೇವಕರಾದ ಲೀಲಾಧರ ಶೆಟ್ಟಿ ಕಾಪು ಇನ್ನಂಜೆ ಇವರು ಶುಭಾಶಂಸನೆಗೈದರು.
ಎಸ್.ವಿ.ಹೆಚ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪುಂಡರೀಕಾಕ್ಷ ಕೊಡಂಚ ಇವರು ಮಕ್ಕಳಿಗೆ ದ್ವಿತೀಯ ಪಿ.ಯು.ಸಿ ನಂತರ ಮತ್ತೇನು ಎನ್ನುವ ವಿಷಯದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.

ಅನಿಲ್ ಆಚಾರ್ಯ ಓಂತಿಬೆಟ್ಟು ಸ್ವಾಗತಿಸಿ, ಎಮ್. ಶ್ರೀನಿವಾಸ್ ಭಟ್ ಉಡುಪಿ ಕಾರ್ಯಕ್ರಮ ನಿರ್ವಹಿಸಿದರು. ಅಮೃತಾ ಭಟ್ ಇವರು ವಂದಿಸಿದರು.

































