ನವದೆಹಲಿ : ದೇಶದಲ್ಲಿ ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಲಾಗಿದ್ದು, ಪ್ರತಿ ಮನೆಯ ಮೇಲೆ ಆಗಸ್ಟ್ 2 ರಿಂದ 15 ರವರೆಗೆ ತ್ರಿವರ್ಣ ಧ್ವಜ ಹಾರಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಕೋರಿದೆ. ಅಲ್ಲದೇ, ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತಿರಂಗಾ ಹಾಕುವಂತೆ ಹೇಳಿದ್ದರು. ಇದೀಗ ಸ್ವತಃ ಮೋದಿ ಅವರೇ ತಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯ ಡಿಪಿ ಬದಲಿಸಿದ್ದಾರೆ.
ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಇಂದು ವಿಶೇಷವಾದ ದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಎಲ್ಲರೂ ಈ ಸಂಭ್ರಮ ಆಚರಿಸೋಣ. ತ್ರಿವರ್ಣ ಧ್ವಜವನ್ನು ಸಾಮೂಹಿಕವಾಗಿ ಹಾರಿಸುವ ಮೂಲಕ ಸಂಭ್ರಮ ಇಮ್ಮಡಿಗೊಳಿಸೋಣ. ಸಾಮಾಜಿಕ ಜಾಲತಾಣಗಳ ಡಿಪಿಯನ್ನು ನಾನು ಬದಲಿಸಿದ್ದೇನೆ. ನೀವು ಕೂಡ ಬದಲಿಸಿ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಪ್ರಧಾನಿ ಪಿಂಗಾಲಿ ವೆಂಕಯ್ಯ ಅವರ ಜನ್ಮದಿನವಾಗಿರುವ ಇಂದು ಅವರಿಗೆ ನಮನ ಸಲ್ಲಿಸಿದ್ದಾರೆ. “ಗೌರವಾನ್ವಿತ ಪಿಂಗಾಲಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ತ್ರಿವರ್ಣ ಧ್ವಜವನ್ನು ನೀಡಿದ ಅವರ ಸಾಧನೆಯನ್ನು ದೇಶ ಸ್ಮರಿಸುತ್ತದೆ. ಚಿರಋಣಿಯಾಗಿದೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿ ಪಡೆದುಕೊಂಡು, ರಾಷ್ಟ್ರ ಪ್ರಗತಿಗಾಗಿ ಕೆಲಸ ಮಾಡುತ್ತಲೇ ಇರೋಣ” ಎಂದು ಅವರು ಹೇಳಿದ್ದಾರೆ.


































