ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕರೋನಾ ಎರಡನೆ ಅಲೆಯಿಂದ ಜನ ಜೀವನ ಸಂಕಷ್ಟಕ್ಕೀಡಾಗಿದೆ. ಯುವಕರು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂತಹ ವೇಳೆಯಲ್ಲಿ ಗಾಬರಿ ಪಡುವುದಕ್ಕಿಂತ ಎಚ್ಚರಿಕೆ ವಹಿಸುವುದು ಅಗತ್ಯ. ಈ ಕಾರಣಕ್ಕಾಗಿಯೇ ಸರಕಾರ ಎರಡನೇ ಹಂತದ ಲಾಕ್ ಡೌನ್ ಘೋಷಿಸಿದೆ ಎಂದು ಬೈಂದೂರು-ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಕೊಲ್ಲೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಹೆಚ್ಚುತ್ತಿರುವ ವೈರಸ್ ನಿಂದ ಜನರ ಜೀವ ಉಳಿಸಲು ಪ್ರಧಾನಿಯವರ ಜೊತೆಗೆ ಮುಖ್ಯಮಂತ್ರಿಯವರು, ಶಾಸಕರು ಶ್ರಮ ಪಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್ ಜೀವದ ಹಂಗು ತೊರೆದು ಶ್ರಮ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ ಎಂದರು.

ಕೋವಿಡ್ ಕೇಸಸ್ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಎಸಿ, ತಾಲೂಕು ಮಟ್ಟದ ಅಧಿಕಾರಿಗಳು,ಶಾಸಕರ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಿದ್ದೇವೆ. ಮತ್ತೆ ಸಭೆ ನಡೆಸಿ ಲಾಕ್ ಡೌನ್ ಯಾವ ರೀತಿ ಬಿಗಿ ಮಾಡಬೇಕು, ಅವಶ್ಯಕ ವಸ್ತುಗಳನ್ನು ಮನೆ ಮನೆಗೆ ಹೇಗೆ ಜನಸಂದಣಿ ಆಗದಂತೆ ತಲುಪಿಸಬೇಕು. ಆಸ್ಪತ್ರೆ ವ್ಯವಸ್ಥೆ ದೃಷ್ಟಿಯಿಂದ ವಿಶೇಷವಾಗಿ ಸೋಂಕು ಹೆಚ್ಚಾಗುತ್ತಿರುವ ಮಲೆನಾಡು, ಸಿದ್ಧಾಪುರಗಳಲ್ಲಿ ಯಾವ ರೀತಿ ಗಮನ ಕೊಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಎರಡು ವಾರದಲ್ಲಿ ದೇಶಾದ್ಯಂತ ಸೋಂಕು ನಿಯಂತ್ರಿಸುವ ವಿಶ್ವಾಸ ಇದೆ ಎಂದು ನುಡಿದರು.

ಸೋಂಕು ಹೆಚ್ಚಾಗದಂತೆ ಕ್ರಮ
ಜನಸಂದಣಿ ಆಗದಂತೆ ಒಂದೊಂದು ಊರಿಗೆ ರೇಷನ್ ಕಾರ್ಡ್, ಕಿಟ್ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು.
ಖಾಸಗಿ ಆಂಬುಲೆನ್ಸ್ ನಿಮ್ಮ ಬೆಲೆಗೆ ಬಂದಿಲ್ಲವಾದ್ರೆ ಟೇಕ್ ಓವರ್ ಮಾಡಲು ಕಾನೂನಿನಲ್ಲ ಅವಕಾಶ ಇದೆ. ಎಷ್ಟು ಬೇಕೋ ಅಷ್ಟು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ.
ಆಶಾ ಕಾರ್ಯಕರ್ತೆಯರಿಗೆ, ಹೆಲ್ತ್ ಸೆಕ್ಟರ್ ಗಳಲ್ಲಿ ಕೆಲಸ ಮಾಡುವವರಿಗೆ ಕೋವಿಡ್ ವಾರಿಯರ್ಸ್ ಪರಿಗಣಿಸಲಾಗಿದ್ದು, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದರು.

ರೈತರಿಗೆ ತಮಗೆ ಬೇಕಾದುದ ಕೊಳ್ಳಲು ಅವಕಾಶವಿದೆ. ಒಂದು ವಾರ ತೋಟಕ್ಕೆ ಬೇಕಾದುದ ಬಳಸದೇ ಹೋದರೂ ಏನಾಗುವುದಿಲ್ಲ ಎಂದಾದಲ್ಲಿ ಮನೆಯಲ್ಲಿಯೇ ಇರಲಿ. ಆದರೆ,
ಆತನ ಮೊದಲ ಆದ್ಯತೆ ಜೀವ, ನಂತರ ತೋಟ. ಮೊದಲ ಆದ್ಯತೆ ಯಾವುದೆಂದು ಆತನೇ ತೀರ್ಮಾನಿಸಬೇಕು. ಆತನಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುವುದು ಎಂದು ನುಡಿದರು.
24 ಗಂಟೆಯೂ ನಾವೂ ಲಭ್ಯವಿದ್ದೇವೆ – ಶಾಸಕ ಸುಕುಮಾರ್ ಶೆಟ್ಟಿ
ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಮಾತನಾಡಿ, ಕೊರೋನಾ ತಡೆಗೆ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಲಾಗಿದೆ. ದಿನದ ೨೪ ಗಂಟೆಯೂ ನಾವೂ ಲಭ್ಯವಿದ್ದೇವೆ. ಯಾವುದೇ ಜನರಿಗೆ ಸಮಸ್ಯೆಯಾದರೂ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಉಪ ವಿಭಾಗಧಿಕಾರಿ ಕೆ.ರಾಜು, ಡಿವೈಎಸ್ಪಿ ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


































