ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ವಲಯದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ನಿತ್ಯಬಳಕೆಯ ದಿನಸಿ ಸಾಮಾಗ್ರಿ, ಸಹಾಯಧನ, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆಯು ಭಾನುವಾರ ಬೈಂದೂರು ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಿಟ್ ವಿತರಿಸಿ ಮಾತನಾಡಿ, ಒಂದು ವರ್ಷದಿಂದ ಕೋವಿಡ್ ಸೋಂಕು ಎಂಬ ಮಹಾಮಾರಿ ಎದುರಿಸುತ್ತಿದ್ದೇವೆ. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಕೋವಿಡ್ ನಿಯಂತ್ರಣದಲ್ಲಿ ಶ್ರಮಿಸುತ್ತಿದ್ದು ಈ ಹಂತದಲ್ಲಿ ಪ್ರಬುದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಒಂದನೇ ಮತ್ತು ಎರಡನೇ ಅಲೆಯ ಕೋವಿಡ್ ಸಂಕಷ್ಟದ ಸಮಯದಲ್ಲಿ ದಾನಿಗಳು ಜನರಿಗೆ ಹಾಗೂ ಕೊರೋನಾ ವಾರಿಯರ್ಸ್ ಆಗಿ ಶ್ರಮಿಸುತ್ತಿರುವಂತವರಿಗೆ ಸಹಾಯ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿಯವರು ಟ್ರಸ್ಟ್ ಮೂಲಕ ಪ್ರಸ್ತುತ ಮನೆ ನಿರ್ಮಾಣ ಮಾಡುತ್ತಿದ್ದು, ಸಂಕಷ್ಟದಲ್ಲಿರುವರಿಗೆ ಆರ್ಥಿಕ ಸಹಕಾರವನ್ನು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.


ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ನಮ್ಮ ಟ್ರಸ್ಟ್ ಮೂಲಕ ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದು, ಪ್ರಸ್ತುತ ಕೊರೋನಾ ವಾರಿಯರ್ಸ್ ಗಳಿಗೆ ಕಿಟ್, ಮಾಸ್ಕ್ ಹಾಗೂ ಆರ್ಥಿಕ ಸಹಕಾರ ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದಲ್ಲಿ ಸುಮಾರು ಎರಡೂವರೆ ಸಾವಿರ ಆಹಾರ ಸಾಮಾಗ್ರಿ ಕಿಟ್ ವಿತರಿಸುವ ಯೋಜನೆ ರೂಪಿಸಿದ್ದೇವೆ ಎಂದರು.
ಈ ಸಂದರ್ಭ 100ಕ್ಕೂ ಅಧಿಕ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಬೈಂದೂರು ಪಿಎಸ್ಐ ಸಂಗೀತಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್, ಉದ್ಯಮಿ ಗುರುರಾಜ ಪಂಜು ಪೂಜಾರಿ, ಗಿರೀಶ್ ಬೈಂದೂರು ಮೊದಲಾದವರು ಇದ್ದರು. ಹಿರಿಯ ಪತ್ರಕರ್ತ ಜನಾರ್ಧನ್ ಮರವಂತೆ ಕಾರ್ಯಕ್ರಮ ನಿರ್ವಹಿಸಿದರು.

































