ಮಂಗಳೂರು : ಆರ್ಥಿಕ ಸಂಕಷ್ಟದಿಂದಾಗಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕದ್ರಿ ಬಳಿಯ ಪಿಂಟೋ ಲೇನ್ ನಲ್ಲಿ ನಡೆದಿದೆ. ಸುರೇಶ್(62) ಮತ್ತು ಪತ್ನಿ ವಾಣಿ(55) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಮನೆಯ ಬಾವಿಗೆ ಹಾರಿ ಪತಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ವಾಣಿ ಟೆರೇಸಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಟ್ ಫಂಡ್ ನಲ್ಲಾದ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷ್ನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸಿದ್ಧ ತಬಲಾ ವಾದಕರಾಗಿದ್ದ ಸುರೇಶ್
ಸುರೇಶ್ ಪ್ರಸಿದ್ಧ ತಬಲಾ ವಾದಕರು. ಆರ್ಕೇಸ್ಟ್ರಾಗಳಲ್ಲಿ ತಬಲಾ ನುಡಿಸುತ್ತಿದ್ದರು. ಈ ಮೂಲಕ ಖ್ಯಾತರಾಗಿದ್ದರು. ಪತ್ನಿ ವಾಣಿ ಅವರು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು, ಅದರೊಂದಿಗೆ ಚಿಟ್ ಫಂಡ್ ನಡೆಸುತ್ತಿದ್ದರು. ಲಾಕ್ ಡೌನ್ ನಿಂದಾಗಿ ಚಿಟ್ ಫಂಡ್ ಕಲೆಕ್ಷನ್ ಸರಿಯಾಗಿ ಆಗುತ್ತಿರಲಿಲ್ಲ. ಹೂಡಿಕೆ ಮಾಡಿದ ಕೆಲವರು ಕರೆ ಮಾಡಿ ಹಣ ಹಿಂತಿರುಗಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿಯೇ ವಾಣಿ ಬುಧವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದು, ವಿಷಯ ತಿಳಿದ ಸುರೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.



































