ಪಡುಬಿದ್ರಿ: ದ್ವಿಚಕ್ರ ವಾಹನಕ್ಕೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಪಡುಬಿದ್ರಿ ಪೇಟೆಯಲ್ಲಿ ಗುರುವಾರ ಸಂಭವಿಸಿದೆ. ಪಡುಬಿದ್ರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅನಿತಾ, ದ್ವಿಚಕ್ರ ವಾಹನದಲ್ಲಿ ಠಾಣೆಯಿಂದ ಕಾರ್ಕಳ ರಸ್ತೆ ಕಡೆಗೆ ಸಾಗುತ್ತಿದ್ದಾಗ, ಮಂಗಳೂರಿನಿಂದ ಕಾರವಾರಕ್ಕೆ ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್, ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ-ಕಾರ್ಕಳ ರಸ್ತೆ ಜಂಕ್ಷನ್ ಬಳಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಅನಿತಾ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

ಅತೀ ವೇಗವಾಗಿ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್, ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಡಿವೈಡರ್ ಮೇಲೇರಿದ ಪರಿಣಾಮ ಪೊಲೀಸ್ ಟ್ರಾಫಿಕ್ ಬೂತ್ ಹಾಗು ವೇಗ ತಡೆಗೆ ಇರಿಸಲಾದ ಡ್ರಮ್ ಗಳು ಹಾನಿಗೊಂಡಿವೆ. ಆ್ಯಂಬುಲೆನ್ಸ್ ನಲ್ಲಿದ್ದ ಮೃತದೇಹವನ್ನು ಮತ್ತೊಂದು ಆ್ಯಂಬುಲೆನ್ಸ್ ನಲ್ಲಿ ಕಾರವಾರಕ್ಕೆ ಸಾಗಿಸಲಾಗಿದೆ. ಘಟನೆ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































