ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದೇಶದ ಕೃಷಿ, ಕಾರ್ಮಿಕ ಕಾಯ್ದೆ ಕಾರ್ಪೋರೇಟ್ ಕಂಪೆನಿಗಳ ವಶ
ಕಾರ್ಮಿಕರು, ರೈತರು, ಕೃಷಿ ಕೂಲಿಕಾರರನ್ನು ದೇಶ-ವಿದೇಶದ ಕಾರ್ಪೋರೇಟ್ ಸಂಸ್ಥೆಗಳ ಕಾಲಾಳುಗಳಾಗಿ ಮಾಡಲು ದೇಶದ ಆಡಳಿತ ಹಿಡಿದ ಬಿಜೆಪಿ ಸರಕಾರ ಕಾಯ್ದೆಗಳನ್ನು ರೂಪಿಸಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಎಚ್ ನರಸಿಂಹ ಹೇಳಿದರು.
ಅವರು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆದ ಕೂಲಿಕಾರರ, ಕಾರ್ಮಿಕರ ರೈತರ ಜಂಟಿ ಹೋರಾಟದಲ್ಲಿ ಮಾತನಾಡಿದರು.
ಕರೋನದ ಸಂಕಷ್ಟ ಕಾಲದಲ್ಲಿ ಜನರು ತಮ್ಮ ಆದಾಯ ಕಳೆದುಕೊಂಡ ಸಂದರ್ಭದಲ್ಲಿ ಕೇಂದ್ರ ಸರಕಾರ ದುಡಿಯುವ ವರ್ಗದ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡು ಮತ್ತಷ್ಟು ಸಂಕಷ್ಟಗಳಿಗೆ ದೂಡುತ್ತಿದೆ. ಬೆಲೆ ಏರಿಕೆ, ರೈತರ ಬೆಂಬಲ ಬೆಲೆ ಕಾನೂನು ರದ್ದು, ವಿದ್ಯುತ್ ಕ್ಷೇತ್ರ ಸೇರಿದಂತೆ ಸಾರ್ವಜನಿಕ ರಂಗದ ಕೈಗಾರಿಕೆಗಳು ಖಾಸಗಿ ಅವರಿಗೆ ಮಾರಾಟ ಮಾಡುತ್ತಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಮೂಡಿ ಬಂದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಘೋಷಣೆಯನ್ನು ಇಂದು ದೇಶದ ಸಂಪತ್ತು ಉಳಿಸಲು ಕಾರ್ಪೋರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯಲ್ಲಿ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಕೆ.ಶಂಕರ್ ಮಾತನಾಡಿ, ರೈತರು ಕಾರ್ಮಿಕರು ಕೂಲಿಕಾರರಿಗೆ ವಿರುದ್ದವಾದ ನೀತಿಗಳನ್ನು ತಂದು ಅವರನ್ನು ವ್ಯವಸ್ಥೆಯ ಗುಲಾಮರಾಗಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ಸರಕಾರ ಹೊರಟಿದೆ. ಮಾರಕವಾದ ನೀತಿಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ ದುಡಿಯುವ ಈ ಮೂರು ವರ್ಗಗಳು ಒಂದಾಗಿ ಹೋರಾಟ ಮಾಡಲು ಅಖಿಲ ಭಾರತದ ಮೂರು ಸಮಿತಿಗಳು ತೀರ್ಮಾನಿಸಿವೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೂಲಿಕಾರರು, ರೈತರು, ಕಾರ್ಮಿಕರ ಮೇಲೆ ನಿರಂತರವಾದ ದಾಳಿಗಳು ನಡೆಸಲಾಗುತ್ತಿದೆ. ಈ ವರ್ಗದ ಹೋರಾಟಗಳನ್ನು ಹತ್ತಿಕ್ಕಲು ಸರಕಾರ ಕರೋನದ ಹೆಸರಿನಲ್ಲಿ ತಡೆಯುತ್ತಿದೆ. ಕರೋನದ ಮೂರನೇ ಅಲೆ ಆರಂಭವಾದರೂ ಕರೋನ ಲಸಿಕೆಯನ್ನು ಎಲ್ಲಾ ನಾಗರಿಕರಿಗೂ ಒದಗಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಸರಕಾರದ ನೀತಿಗಳು ಜನರನ್ನು ಪ್ರತಿಭಟನೆಗೆ ದೂಡುತ್ತಿದೆ. ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವವರನ್ನು ರಾಜದ್ರೋಹದ ಕೇಸ್ ನ್ನು ದಾಖಲಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಹಾಬಲ ವಡೇರ ಹೋಬಳಿ, ದಾಸಭಂಡಾರಿ, ಬಲ್ಕೀಸ್ ಸಂತೋಷ ಹೆಮ್ಮಾಡಿ, ಅರುಣ್ ಕುಮಾರ್, ರಾಜುದೇವಾಡಿಗ ವಿ.ನಾಗ, ಅನಂತ ಕುಲಾಲ್, ಜಗದೀಶ್ ಆಚಾರ್ ಮೊದಲಾದವರಿದ್ದರು.



































