ಬೆಂಗಳೂರು : ಆಗಸ್ಟ್ 23ರಿಂದ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಡ ಶಾಲೆಗಳಲ್ಲಿನ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಬೋಧನಾ ತರಗತಿಗಳನ್ನು ನಡೆಸಲು, ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. 2021-22ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ಕುರಿತಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದ್ದು, ದಿನಾಂಕ 23-08-2021ರಿಂದ ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9ನೇ ಮತ್ತು 10ನೇ ತರಗತಿಗಳನ್ನು ಪ್ರಾರಂಭದಲ್ಲಿ ಪ್ರತಿ ದಿನ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ತೆರೆಯಲು ಹಾಗೂ 1 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಆದ್ದರಿಂದ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ 1 ರಿಂದ 10ನೇ ತರಗತಿಗಳಿಗೆ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳನ್ನು ಮುಂದುವರೆಸಲು ತಿಳಿಸಲಾಗಿದೆ.

ದಿನಾಂಕ 23-08-2021ರಿಂದ ಕೋವಿಡ್-19ರ ಸೋಂಕಿನ ಪ್ರಮಾಣ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಕ್ರಮವಹಿಸಲು ಸೂಚಿಸಿದೆ.
9 ಮತ್ತು 10ನೇ ತರಗತಿ ಆರಂಭಿಸಲು ಮಾರ್ಗಸೂಚಿ ಕ್ರಮಗಳು
- ಶೇ.2ಕ್ಕಿಂತ ಕಡಿಮೆ ಸೋಂಕಿನ ಪ್ರಮಾಣ ಇರುವ ಜಿಲ್ಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ದಿನಾಂಕ 23-08-2021ರಿಂದ ಪ್ರತಿ ದಿನ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿಗಳನ್ನು ನಡೆಸುವುದು.
- ಶಾಲೆ ಪ್ರಾರಂಭಿಸಲು ನಿಗಧಿಪಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
- ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳಿರುವುದಿಲ್ಲ ಎಂದು ದೃಢೀಕರಿಸಬೇಕು.
- 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರವನ್ನು ತರುವುದು
- ಅವಶ್ಯಕತೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿನೀರಿನ ವ್ಯವಸ್ಥೆ ಮಾಡುವುದು.
- ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಅಥವಾ ಪರ್ಯಾಯ ವಿಧಾನದಲ್ಲಿ ಹಾಜರಾಗಬಹುದು.
- ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಆನ್ ಲೈನ್, ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು.
ಪ್ರೌಢ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ನಡೆಸಲು ಸಲಹಾತ್ಮಕ ವೇಳಾಪಟ್ಟಿ
ಭೌತಿಕವಾಗಿ ತರಗತಿಗಳನ್ನು ನಡೆಸಲು ಅವಶ್ಯಕ ದೈಹಿಕ ಅಂತರ ಕಾಪಾಡುವ ದೃಷ್ಠಿಯಿಂದ ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿಕೊಂಡು, ಭೌತಿಕ ತರಗತಿಗಳನ್ನು ನಡೆಸುವುದು.
- ಸೋಮವಾರದಿಂದ ಶುಕ್ರವಾರದವರೆಗೆ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30
- ಶನಿವಾರ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50ರವರೆಗೆ
